ಬೆಳ್ಳೂರು: ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕುಳದಪಾರೆ ಬೀರಮೂಲೆ ಯಲ್ಲಿ ಕಾಟಿಗಳ ಹಿಂಡು ಸ್ಥಳೀಯ ಕೃಷಿಕರ ನಿದ್ದೆಗೆಡಿಸುತ್ತಿದೆ. ಬೀರಮೂಲೆ ಯ ಕೃಷಿಕ ಸೂರ್ಯನಾರಾಯಣ ಭಟ್‌ರ ತೆಂಗಿನ ತೋಟದಲ್ಲಿ ಕಾಟಿಗಳ ದೊಡ್ಡ ಹಿಂಡು ಕಂಡುಬಂದಿದೆ. ಕುಳದಪಾರೆ, ಈಂದುಮೂಲೆ ಗಡಿ ಪ್ರದೇಶದಲ್ಲಿ ಆಗಾಗ ಕಾಟಿಗಳು ಕಾಣಿಸಿಕೊಳ್ಳುತ್ತಿದ್ದರೂ ಸುಮಾರು ೧೦ರಷ್ಟು ಸಂಖ್ಯೆಯಲ್ಲಿ ಕಂಡುಬಂದಿ ರುವುದು ಇದೇ ಮೊದಲೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇದುವರೆಗೂ ಎಲ್ಲೂ ಕೃಷಿಗೆ ಹಾನಿಗೊಳಿಸಿದ ವರದಿಯಾಗದಿದ್ದರೂ ಕೃಷಿಕರ ಭೀತಿ ತೊಲಗಲಿಲ್ಲ.
ಅರಣ್ಯ ಗಡಿ ಪ್ರದೇಶಗಳಿಂದ ಕೃಷಿ ಭೂಮಿಗೆ ಕಾಡುಪ್ರಾಣಿಗಳು ನುಗ್ಗುವುದನ್ನು ತಡೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಂತೆ ೩೭ ಲಕ್ಷ ರೂ. ವೆಚ್ಚದಲ್ಲಿ ಸೌರ ಬೇಲಿ ಹಾಕಲಾಗಿತ್ತು. ಬೆಳ್ಳೂರು ಪಂಚಾಯತ್ ವತಿಯಿಂದ ೧.೮೮ ಲಕ್ಷ ರೂ. ನೆರವು ನೀಡಲಾಗಿತ್ತು. ಬೆಳ್ಳೂರು ಪಂ.ನ ಅರ್ತಿಕುಡ್ಲುವಿನಿಂದ ಎಣ್ಮಕಜೆ ಪಂ.ನ ದೇಶಮೂಲೆವರೆಗೆ ಸುಮಾರು ೯ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೌರ ವಿದ್ಯುತ್ ಬೇಲಿ ಅಳವಡಿಸಲಾಗಿತ್ತು. ಆದರೆ ಈಗ ಈ ಬೇಲಿ ಸಂಪೂರ್ಣ ನಾಶವಾಗಿದ್ದು, ಕಾಟಿಗಳು ಹಾಗೂ ಇತರ ಕಾಡುಪ್ರಾಣಿಗಳು ಹಿಂಡುಹಿಂಡಾಗಿ ಕೃಷಿ ಸ್ಥಳಕ್ಕೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಕಾಡುಪ್ರಾಣಿಗಳ ಉಪಟಳವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.






