ಪೊಲೀಸರ ಚಲನವಲನಗಳ ಬಗ್ಗೆ ನಿಗಾ ಇರಿಸಲು ವಾಟ್ಸಪ್ ಗ್ರೂಪ್ ತಯಾರಿಸಿದ 20 ಮಂದಿ ವಿರುದ್ಧ ಕೇಸು
ಕಾಸರಗೋಡು: ಪೊಲೀಸರ ಚಲನವಲನಗಳ ಬಗ್ಗೆ ಮಾದಕದ್ರವ್ಯ ಮತ್ತು ಆನ್ಲೈನ್ ಲಾಟರಿ ದಂಧೆಯವರಿಗೆ ಸಕಾಲದಲ್ಲಿ ಮಾಹಿತಿ ನೀಡಲು ವಾಟ್ಸಪ್ ಗ್ರೂಪ್ಗೆ ರೂಪು ನೀಡಿದ ಅಡ್ಮಿನ್ಗಳು ಸೇರಿದಂತೆ 20 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿಕೊಂಡ ಕೋಡಿಚ್ಚಾಲ್ ನಿವಾಸಿಯೋರ್ವನನ್ನು ರಾಜಪುರಂ ಪೊಲೀಸರು ಬಂಧಿಸಿದ್ದರು. ಆಗ ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ಪರಿಶೀಲಿಸಿದಾಗ ಅದರಲ್ಲಿ ಫ್ಯಾಮಿಲಿ ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಒಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅದರಲ್ಲಿ ಪೊಲೀಸ್ ವಾಹನಗಳು ಮತ್ತು ಹಲವು ಪೊಲೀಸ್ ಎಯ್ಡ್ ಪೋಸ್ಟ್ಗಳ ಚಿತ್ರಗಳೂ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ತನಿಖೆಯಲ್ಲಿ ಪೊಲೀಸರ ಚಲನವಲನಗಳ ಬಗ್ಗೆ ಮಾದಕ ಮತ್ತು ಆನ್ಲೈನ್ ದಂಧೆಯವರಿಗೆ ಸಕಾಲದಲ್ಲಿ ಮಾಹಿತಿ ನೀಡುವ ವಾಟ್ಸಪ್ ಗ್ರೂಪ್ ಇದಾಗಿದೆ ಎಂದು ಪತ್ತೆಹಚ್ಚಿದ್ದಾರೆ. ಈ ಗ್ರೂಪ್ನಲ್ಲಿ ಒಟ್ಟು 80 ಮಂದಿ ಸದಸ್ಯರಾಗಿದ್ದು, ಅದರಲ್ಲಿ ಹೆಚ್ಚಿನವರು ಮಾದಕದ್ರವ್ಯ ಮತ್ತು ಆನ್ಲೈನ್ ಲಾಟರಿ ವ್ಯವಹಾರದಲ್ಲಿ ತೊಡಗಿದ್ದ ವರಾಗಿದ್ದಾರೆಂದೂ, ಮಾತ್ರವಲ್ಲ ಹಲವರು ಇಂತಹ ಪ್ರಕರಣಗಳಲ್ಲಿ ಆರೋಪಿಗಳಾಗಿರುವುದನ್ನೂ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಪೊಲೀಸರು ಈ ಗ್ರೂಪ್ನ ನಾಲ್ವರು ಅಡ್ಮಿನ್ಗಳೂ ಸೇರಿ ಒಟ್ಟು 20 ಮಂದಿ ಗ್ರೂಪ್ ಸದಸ್ಯರ ವಿರುದ್ಧ ಕೇಸು ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಿದ್ದಾರೆ.