ಭೂಮಿಯ ಹಕ್ಕುಪತ್ರ ಲಭಿಸಿದೆ, ತೆರಿಗೆ ಪಾವತಿಸಲಾಗುತ್ತಿದೆ: ಆದ್ರೆ ಆ ಭೂಮಿ ಎಲ್ಲಿದೆ? ಹೋರಾಟಕ್ಕಿಳಿಯಲು ಯುವಕನ ಸಿದ್ಧತೆ

ಕುಂಬಳೆ: ಸರಕಾರ ಮಂಜೂರು ಮಾಡಿದ ಭೂಮಿಯ ಹಕ್ಕುಪತ್ರ ಲಭಿಸಿ ತೆರಿಗೆ ಪಾವತಿಸಿ ಆ ಬಗೆಗಿನ ಕ್ರಮವನ್ನು ಪೂರ್ತಿಗೊಳಿಸಿದ ಬಳಿಕವೂ ಸ್ಥಳ ಪತ್ತೆಹಚ್ಚಲಾಗದ ಹಿನ್ನೆಲೆಯಲ್ಲಿ ಯುವಕ ಹೋರಾಟಕ್ಕೆ ಇಳಿದಿದ್ದಾನೆ. ಕುಂಬಳೆ ನಿವಾಸಿ ಇರ್ಶಾದ್ ಚಾಕೊ ಕಂದಾಯ ಅಧಿಕಾರಿಗಳ ವಿರುದ್ಧ ಮುಷ್ಕರಕ್ಕೆ ಇಳಿದಿದ್ದಾರೆ. ಕೊಯಿಪ್ಪಾಡಿ ವಿಲ್ಲೇಜ್‌ನಲ್ಲಿ ಕೆಎಸ್‌ಟಿಪಿ ರಸ್ತೆ ಬದಿ ಕೆನ್ಸ್ ಕಾಲೇಜಿನ ಹಿಂಬದಿಯಲ್ಲಿರುವ ಭೂಮಿ ನನಗೆ ಮಂಜೂರು ಮಾಡಲಾಗಿದೆಯೆಂದು ಇರ್ಶಾದ್ ನುಡಿಯುತ್ತಾರೆ. ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇವರ ಕುಟುಂಬ ವಾಸಿಸುತ್ತಿದೆ. ಸ್ವಂತವಾಗಿ ಮನೆ ಎಂಬ ಕನಸನ್ನು ಸಾಕ್ಷಾತ್ಕಾರಿಸಲು ಸರಕಾರಕ್ಕೆ ಭೂಮಿಗಾಗಿ ಅರ್ಜಿ ನೀಡಿದ್ದರು. ಹಲವಾರು ಬಾರಿ ಅರ್ಜಿ ನೀಡಿದ ಹಿನ್ನೆಲೆಯಲ್ಲಿ ಭೂಮಿ ಮಂಜೂರು ಮಾಡಿ ಪಟ್ಟಾ ಮೇಳದಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಆದರೆ ಭೂಮಿ ಅಳೆದು ಗಡಿ ನಿರ್ಣಯಿಸಿ ನೀಡಿರಲಿಲ್ಲ. ಖಾಸಗಿ ಸರ್ವೇಯರ್ ಸಹಿತ ನಿವೃತ್ತ ವಿಲ್ಲೇಜ್ ಆಫೀಸರ್ ಸಹಾಯದೊಂದಿಗೆ ಭೂಮಿಯನ್ನು ಪತ್ತೆಹಚ್ಚಲು ಯತ್ನಿಸಿದರಾದರೂ ಫಲ ಉಂಟಾಗಲಿಲ್ಲ. ಬಳಿಕ ತಾಲೂಕು ಸರ್ವೇಯರ್ ತಲುಪಿದರೂ ಭೂಮಿ ಕಂಡುಹಿಡಿಯಲಾಗಲಿಲ್ಲ. ಪಟ್ಟಾದಲ್ಲಿನ ಸರ್ವೇ ನಂಬ್ರ ಹಾಗೂ ಸ್ಕೆಚ್‌ನ ಸರ್ವೇ ನಂಬ್ರಗಳ ಮಧ್ಯೆ ವ್ಯತ್ಯಾಸವಿದೆಯೆಂದು ಇರ್ಶಾದ್ ಸೂಚಿಸಿದರು. ಖಾಸಗಿ ಸರ್ವೇಯರ್ ನಡೆಸಿದ ತಪಾಸಣೆಯಲ್ಲಿ ಸರ್ವೇ ನಂಬ್ರದ ತಪ್ಪನ್ನು ಕಂಡುಹಿಡಿಯಲಾಗಿತ್ತು. ಬಳಿಕ ತಾಲೂಕು ಕಚೇರಿಯಲ್ಲಿ ಪಟ್ಟಾದಲ್ಲಿ ಸರ್ವೇ ನಂಬ್ರ ತಿದ್ದುಪಡಿ ಮಾಡಿ ಕೊಯಿಪ್ಪಾಡಿ ವಿಲ್ಲೇಜ್ ಅಧಿಕಾರಿ ತೆರಿಗೆ ರಶೀದಿಯಲ್ಲಿ ತಿದ್ದುಪಡಿ ಮಾಡಿ ಮೊಹರು ಹಾಕಿ ನೀಡಿರುವುದಾಗಿ ಇರ್ಶಾದ್ ತಿಳಿಸಿದ್ದಾರೆ.

ಇದೇ ಸಮಸ್ಯೆಯನ್ನು ಎದುರಿಸುತ್ತಿರುವ ಹಲವಾರು ಮಂದಿ ಕೊಯಿಪ್ಪಾಡಿಯಲ್ಲಿದ್ದಾರೆಂದು ಇರ್ಶಾದ್ ತಿಳಿಸುತ್ತಾರೆ. ಇದಕ್ಕೆ ಪರಿಹಾರ ಕಾಣಲು ಹಲವು ಕಾಲದಿಂದ ತಾಲೂಕು, ವಿಲ್ಲೇಜ್ ಕಚೇರಿಗಳಿಗೆ ಹತ್ತಿ ಇಳಿಯುತ್ತಿರುವುದಾಗಿ ಅವರು ತಿಳಿಸುತ್ತಾರೆ. ಮೂರು ದಿನದೊಳಗೆ ಭೂಮಿಯನ್ನು ಅಳೆದು ಗಡಿ ನಿರ್ಣ ಯಿಸಿ ನೀಡದಿದ್ದರೆ ವಿಲ್ಲೇಜ್ ಕಚೇರಿ ಮುಂಭಾಗ ಅಥವಾ ತಾಲೂಕು ಕಚೇರಿ ಪರಿಸರದಲ್ಲಿ ಮುಷ್ಕರ ಹೂಡುವುದಾಗಿ ಇರ್ಶಾದ್ ಚಾಕೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page