ತಾಳಿಪಡ್ಪುನಲ್ಲಿ ಕಾಡು ಕೋಣ ಪತ್ತೆ: ನಾಗರಿಕರು ಭೀತಿಯಲ್ಲಿ
ಕಾಸರಗೋಡು: ತಾಳಿಪಡ್ಪುನಲ್ಲಿ ಕಾಡು ಕೋಣ ಪತ್ತೆಯಾದ ಬಗ್ಗೆ ವರದಿಯಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಹುಡುಕಾಟ ನಡೆಸಿದ್ದರು. ನಿನ್ನೆ ಸಂಜೆ ತಾಳಿಪಡ್ಪುವಿನ ಬಿಜೆಪಿ ಕಚೇರಿ ಸಮೀಪದಲ್ಲಿ ಕಾಡುಕೋಣ ಕಂಡು ಬಂದಿದೆ. ಸಂಜೆ ೬.೩೦ರ ವೇಳೆ ಸೂರ್ಯ ಎಂಬವರಿಗೆ ಕಾಡು ಕೋಣ ಮೊದಲು ಕಾಣಿಸಿದೆಯೆಂದು ಹೇಳಲಾಗುತ್ತಿದೆ. ಸ್ಮಶಾನವೊಂದರ ಸಮೀಪವಿರುವ ಕಾಡಿನೊಳಗೆ ಓಡಿ ಹೋದ ಕಾಡುಕೋಣವನ್ನು ಹಲವರು ಕಂಡಿದ್ದಾರೆನ್ನಲಾಗಿದೆ. ಆರ್ಎಸ್ಎಸ್ ಕಾರ್ಯಾಲಯ ಸಮೀಪದ ಮನೆಗಳ ಅಂಗಳಕ್ಕೂ ಕಾಡುಕೋಣ ತಲುಪಿದೆ ಎನ್ನಲಾಗಿದೆ. ಕಾಡುಕೋಣ ಎಲ್ಲಿಂದ ಇಲ್ಲಿಗೆ ತಲುಪಿದೆಯೆಂದು ತಿಳಿದು ಬಂದಿಲ್ಲ. ಕಾಡಿನಲ್ಲಿ ಹಿಂಡಿನಿಂದ ತಪ್ಪಿ ಈ ಕಾಡುಕೋಣ ಇಲ್ಲಿಗೆ ತಲುಪಿರಬಹುದೆಂದು ಸಂಶಯಿಸಲಾಗುತ್ತಿದೆ.