ದಂಪತಿ ತೋಟದ ಕೆರೆಯಲ್ಲಿ ಸಾವನ್ನಪ್ಪಿದಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ದಂಪತಿ ತೋಟದ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ವೆಳ್ಳರಿ ಕುಂಡ್ ಮಾಲೋಂ ಕಾರ್ಯೋಟ್ ಚಾಲ್ ತಡತ್ತಿಲ್ ವೀಟಿಲ್‌ನ ಸಾಬು (56) ಮತ್ತು ಅವರ ಪತ್ನಿ ಸಜಿ ಸಾಬು (52) ಸಾವನ್ನಪ್ಪಿದ ದುರ್ದೈವಿಗಳಾದ ದಂಪತಿ. ಇವರು ನಿನ್ನೆ ಬೆಳಿಗ್ಗೆ ತಮ್ಮ  ಕೃಷಿ ತೋಟಕ್ಕೆ ಹೋಗಿದ್ದರು. ಮಧ್ಯಾಹ್ನ ಕಳೆದರೂ ಮನೆಗೆ ಹಿಂತಿರುಗದೇ ಇರುವುದನ್ನು ಗಮನಿಸಿದ ಅವರ ಏಕ ಪುತ್ರ ಮೆಲ್ವಿನ್ ಕೃಷಿ ತೋಟಕ್ಕೆ ಹೋಗಿ ಹುಡುಕಾಟದಲ್ಲಿ ತೊಡಗಿದಾಗ ದಂಪತಿ ಅಲ್ಲಿನ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಭಾರೀ ಪೊದೆಗಳಿಂದ ಆವೃತ್ತವಾ ಗಿರುವ ಈ ಕೆರೆಯ ನೀರನ್ನು ಶುದ್ಧೀಕ ರಿಸಲೆಂದು ಅದಕ್ಕೆ ಕ್ಲೋರಿನೇಷನ್ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿರಬಹುದೆಂದು ಶಂಕಿಸಲಾಗುತ್ತಿದೆ. ಕ್ಲೋರಿನೇಶನ್ ನಡೆಸುತ್ತಿದ್ದ ವೇಳೆ ಓರ್ವರು ತೆರೆಗೆ ಬಿದ್ದಾಗ ಅವರನ್ನು ರಕ್ಷಿಸಲು ಎರಡನೇ ವ್ಯಕ್ತಿ ಯತ್ನಿಸುವಾಗ ಅವರೂ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಚೀಮೇನಿಯಿಂದ ಅಗ್ನಿಶಾಮಕ ದಳ ಆಗಮಿಸಿ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಿದರು. ವೆಳ್ಳರಿಕುಂಡ್ ಪೊಲೀಸರು ಮೃತದೇಹಗಳ ಶವ ಮಹಜರು ನಡೆಸಿದ ನಂತರ ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಹೊಸದುರ್ಗ ಡಿವೈಎಸ್‌ಪಿ ಎನ್.ಪಿ. ಅನಿಲ್ ಕುಮಾರ್ ಈ ಬಗ್ಗೆ ತನಿಖೆ ನಡೆಸಿದರು.

You cannot copy contents of this page