ಉಪ್ಪಳ: ತಂದೆಯ ಇರಿತದಿಂದ ಮುದ್ದಿನ ಮಗಳು ಸಾವಿಗೀಡಾದ ಘಟನೆಯಿಂದ ನಾಡು ಶೋಕಸಾಗರದಲ್ಲಿ ಮುಳುಗಿರುವಂತೆಯೇ ಇರಿತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂಬಂಧಿಕನೂ ಮೃತಪಟ್ಟ ಘಟನೆ ನಡೆದಿದೆ. ಒಟ್ಟಾರೆಯಾಗಿ ಅವಳಿ ಕೊಲೆ ನಡೆದ ತೂಮಿನಾಡು ಹಾಗೂ ಪರಿಸರ ಪ್ರದೇಶಗಳಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಘಟನೆ ಸ್ಥಳಕ್ಕೆ ಸಂಬಂಧಿಕರು, ನಾಗರಿಕರು ಸಹಿತ ಭಾರೀ ಸಂಖ್ಯೆಯಲ್ಲಿ ಜನರು ತಲುಪುತ್ತಿದ್ದು ಇಡೀ ನಾಡೇ ದುಃಖದಲ್ಲಿ ಮುಳುಗಿದೆ.
ಮಂಜೇಶ್ವರ ತೂಮಿನಾಡು ಹಿಲ್ಟಾಪ್ ನಗರದಲ್ಲಿ ನಿನ್ನೆ ಸಂಜೆ ಈ ಭೀಕರ ಘಟನೆ ನಡೆದಿದೆ. ಈ ಸಂಬಂಧ ಮೂಲತಃ ಕರ್ನಾಟಕ ನಿವಾಸಿಯೆನ್ನಲಾದ ಉಮ್ಮರ್ ಫಾರೂಕ್ನನ್ನು ಪೊಲೀಸರು ಬಂಧಿಸಿದ್ದಾರೆ. ಉಮ್ಮರ್ ಫಾರೂಕ್ ಹಾಗೂ ತಾಹಿರ ದಂಪತಿಯ ಏಕೈಕ ಪುತ್ರಿಯಾದ ಮರಿಯಂ ಜುಮೈಲ (18) ಸ್ವಂತ ತಂದೆ ನಡೆಸಿದ ಇರಿತಕ್ಕೆ ಬಲಿಯಾದ ದುರ್ದೈವಿಯಾಗಿದ್ದಾಳೆ.
ಇರಿತದಿಂದ ಗಾಯಗೊಂಡಿದ್ದ ಈಕೆಯ ತಾಯಿಯ ಸಹೋದರಿಯ ಪತಿ ಶೇಕುಂಞಿ (63) ಇಂದು ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಉಮ್ಮರ್ ಫಾರೂಕ್ನ ಪತ್ನಿ ತಾಹಿರ ಹಾಗೂ ಪುತ್ರಿ ಮರಿಯಂ ಜುಮೈಲ ತೂಮಿ ನಾಡು ಹಿಲ್ಟಾಪ್ನಲ್ಲಿರುವ ಶೇಕುಂಞಿಯ ಮನೆಯಲ್ಲಿ ವಾಸಿಸುತ್ತಿದ್ದರು. ಗಲ್ಫ್ನಲ್ಲಿದ್ದ ಉಮ್ಮರ್ ಫಾರೂಕ್ ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದು, ಬಳಿಕ ಶೇಕುಂಞಿಯ ಮನೆಯಲ್ಲೇ ವಾಸಿಸುತ್ತಿದ್ದನೆನ್ನ ಲಾಗಿದೆ. ಪತ್ನಿ ತಾಹಿರರ ಸಹೋದರಿಯ ಕುಟುಂಬದೊಂದಿಗೆ ಆಸ್ತಿ ವಿಷಯದಲ್ಲಿ ಉಮ್ಮರ್ ಫಾರೂಕ್ಗೆ ತರ್ಕವಿತ್ತೆಂದು ಹೇಳಲಾಗುತ್ತಿದೆ. ಈ ತರ್ಕವನ್ನು ಮಾತುಕತೆ ಮೂಲಕ ಬಗೆಹರಿಸಲು ಉಮ್ಮರ್ ಫಾರೂಕ್ನ ಸಹೋದರನೂ ನಿನ್ನೆ ಅಲ್ಲಿಗೆ ತಲುಪಿದ್ದರೆನ್ನಲಾಗಿದೆ. ಮಾತುಕತೆ ವೇಳೆ ಶೇಕುಂಞಿ ಹಾಗೂ ಉಮ್ಮರ್ ಫಾರೂಕ್ ಮಧ್ಯೆ ವಾಗ್ವಾದ ಉಂಟಾಗಿದ್ದು, ಈ ವೇಳೆ ಉಮ್ಮರ್ ಫಾರೂಕ್ ಕೈವಶವಿರಿಸಿಕೊಂಡಿದ್ದ ಚಾಕುವನ್ನು ಶೇಕುಂಞಿ ಮೇಲೆ ಬೀಸಿದ್ದಾನೆಂದೂ ಹೇಳಲಾಗುತ್ತಿದೆ. ಈ ವೇಳೆ ಅದನ್ನು ತಡೆಯಲು ಜುಮೈಲ ಪ್ರಯತ್ನಿಸಿದ್ದು ಆವಾಗ ಜುಮೈಲಳ ಕುತ್ತಿಗೆಗೆ, ಎದೆ, ಹೊಟ್ಟೆಗೆ ಇರಿತವುಂಟಾಗಿದೆ. ಅಲ್ಲದೆ ಶೇಕುಂಞಿಯ ಕಾಲಿಗೂ ಇರಿತವುಂಟಾಗಿದೆ. ರಕ್ತದೋಕುಳಿ ಹರಿಯತೊಡಗಿದ ಅವರಿಬ್ಬರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜುಮೈಲಳ ಜೀವ ರಕ್ಷಿಸಲಾಗಲಿಲ್ಲ.

ಇದೇ ವೇಳೆ ಬಲಕಾಲಿಗೆ ಇರಿತದಿಂದ ಗಂಭೀರ ಗಾಯಗೊಂ ಡಿದ್ದ ಶೇಕುಂಞಿ ನೋವನ್ನು ಲೆಕ್ಕಿಸದೆ ಜುಮೈಲಳೊಂದಿಗೆ ಆಸ್ಪತ್ರೆಗೆ ತಲುಪಿ ದ್ದರು. ಆಸ್ಪತ್ರೆಗೆ ತಲುಪಿದೊಡನೆ ಕುಸಿದು ಬಿದ್ದ ಅವರನ್ನು ಅಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶೇಕುಂಞಿ ಇಂದು ಬೆಳಿಗ್ಗೆ ಸಾವಿಗೀಡಾದರೆಂದು ವರದಿಯಾಗಿದೆ. ಈ ಇಬ್ಬರ ಮೃತದೇಹಗಳನ್ನು ಇಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಸ್ವಂತ ತಂದೆಯ ಇರಿತದಿಂದ ಪುತ್ರಿ ಮೃತಪಟ್ಟಳೆಂಬ ಸುದ್ದಿ ಹರಡುತ್ತಿದ್ದಂತೆ ಸಂಬಂಧಿಕರು, ನಾಗರಿಕರ ಸಹಿತ ಭಾರೀ ಸಂಖ್ಯೆಯಲ್ಲಿ ಜನರು ಘಟನೆ ಸ್ಥಳವಾದ ತೂಮಿನಾಡು ಹಿಲ್ಟಾಪ್ ನಗರಕ್ಕೆ ತಲುಪಿದ್ದಾರೆ. ಮನೆಯವರಿಗೂ, ಸಂಬಂಧಿಕರಿಗೂ, ಸಹಪಾಠಿಗಳಿಗೂ ಅಚ್ಚು ಮೆಚ್ಚಿನವಳಾಗಿದ್ದ ಮರಿಯಂ ಜುಮೈಲ ಮೃತಪಟ್ಟಳೆಂಬ ಸುದ್ದಿಯನ್ನು ಅವರಿಗೆ ನಂಬಲಾಗದ ಸ್ಥಿತಿ ಉಂಟಾಗಿತ್ತು. ಪ್ಲಸ್ಟು ಕಳೆದ ಬಳಿಕ ಜುಮೈಲ ಉಪ್ಪಳದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಳು.
ಮೃತಪಟ್ಟ ಶೇಕುಂಞಿಯವರು ಪತ್ನಿ ರಹಾನ,ಮಕ್ಕಳಾದ ಸೈಫು,ಶಫೀನ,ಶುಹೈಬ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಅವಳಿ ಕೊಲೆ: ಆರೋಪಿ ಬಂಧನ
ಮಂಜೇಶ್ವರ: ತೂಮಿನಾಡು ಹಿಲ್ಟಾಪ್ ನಗರದ ಮರಿಯಂ ಜುಮೈಲ ಹಾಗೂ ಈಕೆಯ ತಾಯಿಯ ಸಹೋದರಿಯ ಪತಿ ಶೇಕುಂಞಿಯ ಸಾವಿಗೆ ಸಂಬಂಧಿಸಿ ಆರೋಪಿಯಾದ ಉಮ್ಮರ್ ಫಾರೂಕ್ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.ಪುತ್ರಿ ಜುಮೈಲಾಳ ಸಾವು ಸಂಭವಿಸಿದ ತಕ್ಷಣ ಉಮ್ಮರ್ ಫಾರೂಕ್ ನನ್ನು ಮಂಜೇಶ್ವರ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಬಳಿಕ ಬಂಧನ ದಾಖ ಲಿಸಲಾಗಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸು ವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಇರಿಯಲು ಬಳಸಿದ ಚಾಕುವನ್ನು ಮನೆ ಸಮೀಪದಿಂದ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂ ಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.







