ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 49.14 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಯುವಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಳ ಕೊಲ್ಲಂಗಾನದ ಮೊಹ ಮ್ಮದ್ ರಫೀಕ್.ಬಿ (39) ಬಂಧಿತ ಆರೋಪಿ. ಕಾಸರಗೋಡು ಪೊಲೀಸ್ ಠಾಣೆ ಎಸ್ಐ ಸಿ.ಆರ್. ಮೌಶಿಮ್ ನೇತೃತ್ವದ ಪೊಲೀಸರ ತಂಡ ವಿದ್ಯಾನಗರ ಸರಕಾರಿ ಕಾಲೇಜು ಬಳಿ ನಿನ್ನೆ ಸಂಜೆ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ ಸ್ವಿಫ್ಟ್ ಕಾರನ್ನು ತಡೆದು ನಿಲ್ಲಿಸುವಂತೆ ಕೈಸನ್ನ ಮಾಡಿದರೂ ಅದು ನಿಲ್ಲದೆ ಮುಂದಕ್ಕೆ ಸಾಗಿದೆ. ಅದನ್ನು ಕಂಡ ಪೊಲೀಸರು ತಕ್ಷಣ ತಮ್ಮ ವಾಹನದಲ್ಲಿ ಹಿಂಬಾಲಿಸಿ ಅದನ್ನು ತಡೆದು ನಿಲ್ಲಿಸುವಲ್ಲಿ ಸಫಲರಾಗಿ ದ್ದಾರೆ. ಬಳಿಕ ತಪಾಸಣೆ ಗೊಳಪಡಿಸಿದಾಗ ಆರೋಪಿಯ ಕೈವಶವಿದ್ದ ಎಂಡಿಎಂಎ ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿ ಆ ಮಾಲನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆತ ಚಲಾಯಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಮಾರಾಟ ಕ್ಕಾಗಿ ಈ ಮಾಲನ್ನು ತಂದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.







