ಕಾಸರಗೋಡು: ಬಟ್ಟೆಬರೆಗಳ ವಿಸ್ಮಯಲೋಕದಲ್ಲಿ ಮೈಮರೆತಾಗ ಗ್ರಾಹಕರಲ್ಲಿ ಕೆಲವರು ತಮ್ಮ ಮಕ್ಕಳನ್ನೇ ಅಂಗಡಿಗಳಲ್ಲಿ ಮರೆತುಹೋಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದೇ ರೀತಿಯ ಘಟನೆಯೊಂದು ಕಾಸರಗೋಡು ನಗರದಲ್ಲೂ ನಡೆದಿದೆ. ಮನೆ ಮಂದಿಯನ್ನು, ಹೆತ್ತವರನ್ನು ಕಾಣದೆ ಮೂರು ಮಕ್ಕಳು ಬಟ್ಟೆಬರೆ ಅಂಗಡಿಯಲ್ಲಿ ಕೂಗುತ್ತಿದ್ದಾಗ ನೌಕರರು ಅವರನ್ನು ಸಮಾಧಾನಪಡಿಸಿದ್ದರು. ಕಾಸರಗೋಡಿನ ಬಟ್ಟೆಬರೆ ಅಂಗಡಿಯೊಂದಕ್ಕೆ ತಲುಪಿದ ಮಹಿಳೆಯರು ತಮ್ಮ ಮಕ್ಕಳನ್ನು ಅಲ್ಲೇ ಮರೆತು ಹಿಂತಿರುಗಿದ್ದಾರೆ. ಜನರ ಮಧ್ಯದಲ್ಲಿ ಹೆತ್ತವರನ್ನು ಅರಸುತ್ತಾ, ಗೂಕುತ್ತಾ ಸಾಗುತ್ತಿದ್ದ ಮಕ್ಕಳನ್ನು ಬಟ್ಟೆಬರೆ ಅಂಗಡಿಯ ನೌಕರರು ಸಮಾಧಾನಪಡಿಸಿ ಅವರ ಊರು ಹಾಗೂ ತಂದೆ ತಾಯಿಯಬಗ್ಗೆ ಪ್ರಶ್ನಿಸಿದರೂ ಆ ಮಾಹಿತಿ ನೀಡುವಷ್ಟು ಪ್ರಬುದ್ಧತೆ ಮಕ್ಕಳಿಗಿರಲಿಲ್ಲ. ಇದರಿಂದ ಈ ಮಕ್ಕಳ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸಿ ಬಟ್ಟೆಬರೆ ಹಾಗೂ ಚಿನ್ನದ ಆಕರ್ಷಣೆಗೊಳಗಾಗಿ ಮೈಮರೆತು ಮಕ್ಕಳನ್ನು ಬಿಟ್ಟು ಹೋಗುತ್ತಿರುವ ತಂದೆ ತಾಯಿಯವರು ಗಮನಿಸಬೇಕೆಂಬ ಸಂದೇಶವನ್ನು ಹಾಕಿದ್ದರು. ಈ ದೃಶ್ಯಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದನ್ನು ಕಂಡು ಹೆತ್ತವರು ಬಟ್ಟೆಬರೆ ಅಂಗಡಿಗೆ ತಲುಪಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ.






