ಕಾಸರಗೋಡು: ಇಂಜಿನ್ ಹಾನಿಗೀಡಾದ ಹಿನ್ನೆಲೆಯಲ್ಲಿ ಸಮುದ್ರದ ಮಧ್ಯೆ ಸಿಲುಕಿಕೊಂಡ ದೋಣಿಯಲ್ಲಿದ್ದ ಮೀನು ಕಾರ್ಮಿಕರನ್ನು ಕುಂಬಳೆ ಪೊಲೀಸರು ಹಾಗೂ ನಾಗರಿಕರು ಸೇರಿ ಸುರಕ್ಷಿತವಾಗಿ ದಡಕ್ಕೆ ತಲುಪಿಸಿ ಅಪಾಯದಿಂದ ಪಾರು ಮಾಡಿದ್ದಾರೆ. ತಮಿಳುನಾಡು ನಿವಾಸಿ ಮೈಕಲ್ (31), ಕರ್ನಾಟಕ ನಿವಾಸಿ ಸತೀಶ್ (39) ಎಂಬಿವರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಇವರು ಮಂಗಳೂರಿನ ಶಾಹುಲ್ ಹಮೀದ್ ಎಂಬವರ ಮಾಲ ಕತ್ವದ ದೋಣಿಯ ಕಾರ್ಮಿಕರಾಗಿ ದ್ದಾರೆ. ಮೀನುಗಾರಿಕೆ ನಡೆಸುತ್ತಿದ್ದಂತೆ ದೋಣಿಯ ಇಂಜಿನ್ ಹಾನಿಗೀಡಾಗಿ ರುವುದಾಗಿ ತಿಳಿದು ಬಂದಿದೆ. ಇದರಿಂದ ಕಾಸರಗೋಡು ಭಾಗಕ್ಕೆ ಸಾಗತೊಡಗಿದ ದೋಣಿಯನ್ನು ನಿಯಂತ್ರಿಸಲು ಕಾರ್ಮಿಕರಿಗೆ ಸಾಧ್ಯವಾಗಲಿಲ್ಲ. ನಿನ್ನೆ ಸಂಜೆ 7 ಗಂಟೆ ವೇಳೆ ದೋಣಿ ಶಿರಿಯ ಸಮುದ್ರದಲ್ಲಿ ತೇಲುತ್ತಾ ಸಾಗುತ್ತಿರುವುದು ಗಮನಕ್ಕೆ ಬಂದ ಇತರ ದೋಣಿಗಳಲ್ಲಿದ್ದ ಮೀನು ಕಾರ್ಮಿಕರು ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಇದರಂತೆ ಕುಂಬಳೆ ಪೊಲೀಸ್ ಠಾಣೆಯ ಎಸ್ಐಗಳಾದ ಆರ್ಪಿ ಅನೂಪ್, ಸುರೇಂದ್ರನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ಗಳಾದ ಸತೀಶ್, ಪ್ರಸೋನ್ ಎಂಬಿವರು ಇತರ ಮೀನು ಕಾರ್ಮಿಕರ ಸಹಾಯದೊಂದಿಗೆ ದೋಣಿ ಮೂಲಕ ಸಮುದ್ರಕ್ಕೆ ತೆರಳಿ ಹಾನಿಗೀಡಾದ ದೋಣಿಯಿಂದ ಕಾರ್ಮಿಕರನ್ನು ದಡಕ್ಕೆ ತಲುಪಿಸಿದ್ದಾರೆ. ಬಳಿಕ ಅವರನ್ನು ವಾಹನದಲ್ಲಿ ಊರಿಗೆ ಕಳುಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






