ಕಾಸರಗೋಡು: ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದ ವಿಟ್ಲ ನಿವಾಸಿಯೂ, ಕ್ಷೇತ್ರದ ಅಧೀನತೆಯ ಲ್ಲಿರುವ ಕಟ್ಟಡದಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿದ್ದ ಬಿ. ಅನಂತಕೃಷ್ಣ ಭಟ್ (49) ಮೃತಪಟ್ಟ ವ್ಯಕ್ತಿ. ೨೭ ವರ್ಷಗಳ ಹಿಂದೆ ಇವರು ಮಲ್ಲ ಕ್ಷೇತ್ರದಲ್ಲಿ ಅರ್ಚಕನಾಗಿ ಕೆಲಸಕ್ಕೆ ಸೇರಿದ್ದರೆಂದು ಸಹೋದರ ತಿಳಿಸಿದ್ದಾರೆ. ನಿನ್ನೆ ಸಂಜೆ ಕ್ಷೇತ್ರದಲ್ಲಿ ಪೂಜೆ ಕಾರ್ಯಕ್ಕೆ ಇವರು ತಲುಪಬೇಕಾಗಿತ್ತು. ಆದರೆ ನಾಪತ್ತೆಯಾದ ಹಿನ್ನೆಲೆಯಲ್ಲಿ ನೌಕರರು ವಾಸಸ್ಥಳಕ್ಕೆ ತಲುಪಿದರೂ ಪತ್ತೆಯಾಗಲಿಲ್ಲ. ಬಳಿಕ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ನಡೆದು ಹೋಗುತ್ತಿರುವುದು ಕಂಡುಬಂದಿದೆ. ಪರಿಸರ ಪ್ರದೇಶಗಳಲ್ಲಿ ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಬಳಿಕ ಕ್ಷೇತ್ರ ಸಮೀಪದ ತೋಡಿನಲ್ಲಿ ಕೃಷಿ ಅಗತ್ಯಕ್ಕಾಗಿ ನೀರು ತುಂಬಿಸಿದ್ದ ಸ್ಥಳದಲ್ಲಿ ಬಿದ್ದಿರಬಹುದೇ ಎಂಬ ಸಂಶಯದ ಮೇರೆಗೆ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿತ್ತು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಉಮೇ ಶನ್, ಫಯರ್‌ಮೆನ್‌ಗಳಾದ ನೌಫಲ್, ಶಬಿಲ್, ಹೋಂಗಾರ್ಡ್‌ಗಳಾದ ರಾಜು, ರಾಜೇಂದ್ರ ಎಂಬಿವರು ಸ್ಥಳಕ್ಕೆ ತಲುಪಿ ನೀರಿನಲ್ಲಿ ಶೋಧ ನಡೆಸಿದಾಗ ರಾತ್ರಿ 10 ಗಂಟೆ ವೇಳೆ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಯಿತು. ಘಟನೆ ಬಗ್ಗೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೆಂಕಟ್ರಮಣ ಭಟ್-ಲೀಲಾವತಿ ದಂಪತಿ ಪುತ್ರನಾದ ಮೃತರು ಸಹೋದರ ಶ್ರೀಪತಿ ಭಟ್, ಸಹೋದರಿಯರಾದ ಪ್ರಭಾವತಿ, ಭಾಗ್ಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







