ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟೋರಸ್ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ; ಒಂದೂವರೆ ಗಂಟೆ ಕಾರ್ಯಾಚರಣೆ ಮೂಲಕ ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದ ಕ್ಲೀನರ್‌ನನ್ನು ರಕ್ಷಿಸಿದ ಅಗ್ನಿಶಾಮಕ ದಳ

ಕಾಸರಗೋಡು: ನಗರದ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ  ಟೋರಸ್ ಲಾರಿಯ ಹಿಂಬದಿಗೆ ಇನ್ನೊಂದು ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ಹಿನ್ನೆಲೆಯಲ್ಲಿ ಒಂದೂವರೆ ಗಂಟೆ ಕಾಲ ಕ್ಯಾಬಿನ್‌ನಲ್ಲಿ ಸಿಲುಕಿದ ಲಾರಿ ಕ್ಲೀನರ್‌ನನ್ನು ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ಸಾಹಸಿಕ ವಾಗಿ ರಕ್ಷಿಸಿದ್ದಾರೆ. ಪಶ್ಚಿಮಬಂಗಾಲ ನಿವಾಸಿಯಾದ ಸ್ವರೂಪ್ ಮೋದಿ (೨೮) ಎಂಬವರನ್ನು ರಕ್ಷಿಸಲಾಗಿದೆ.

ನಿನ್ನೆ ರಾತ್ರಿ ೧೨ ಗಂಟೆ ವೇಳೆ ಅಗ್ನಿಶಾಮಕದಳ ಕಚೇರಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟೋರಸ್ ಲಾರಿಯ ಹಿಂಬದಿಗೆ ಕಾಸರಗೋಡು ಕೆಎಸ್‌ಇಬಿಗೆ ಇಲೆಕ್ಟ್ರಿಕ್ ಕೇಬಲ್ ಹೇರಿ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಲಾರಿಯ ಮುಂಭಾಗ ಪೂರ್ಣವಾಗಿ ನಜ್ಜುಗುಜ್ಜಾಗಿದೆ. ಢಿಕ್ಕಿಯ ಆಘಾತದಿಂದ ತಲಾ ೬೦೦ ಕಿಲೋ ಭಾರವುಳ್ಳ ೧೬ ರೋಲ್ ಕೇಬಲ್‌ಗಳು ಕ್ಯಾಬಿನ್‌ನ ಹಿಂಭಾಗಕ್ಕೆ ತಳ್ಳಲ್ಪಟ್ಟಿದೆ. ಇದರಿಂದ ಚಾಲಕ ಬಿಶ್ವಜಿತ್ ಮಂ ಡಲ್, ಕ್ಲೀನರ್ ಸ್ವರೂಪ್ ಎಂಬಿವರು ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದರು. ಅಪಘಾತವನ್ನು ಕಂಡ ವ್ಯಕ್ತಿಯೊಬ್ಬರು ರಾಷ್ಟ್ರೀಯ ಹೆದ್ದಾರಿಯಿಂದ ಬೊಬ್ಬೆ ಹಾಕಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಗಮನಕ್ಕೆ ಬಂದಿದೆ. ಕೂಡಲೇ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್‌ರ ನೇತೃತ್ವದಲ್ಲಿ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿದೆ. ಕೇಬಲ್ ರೋಲ್‌ಗಳನ್ನು ತೆರವುಗೊಳಿಸದೆ ಕ್ಯಾಬಿನ್ ಮುರಿದರೆ ಚಾಲಕ ಹಾಗೂ ಕ್ಲೀನರ್ ಅಪಾಯ ಕ್ಕೀಡಾಗುವರೆಂದು ಅಗ್ನಿಶಾಮಕದಳ ಅಂದಾಜಿಸಿದೆ. ಇದರಿಂದ ವಿವಿಧ ಉಪಕರಣಗಳನ್ನು  ಉಪಯೋಗಿಸಿ ಲಾರಿಯ ಕ್ಯಾಬಿನ್ ಭಾಗಕ್ಕೆ ಆಧಾರವಾಗಿ ನಿಲ್ಲಿಸಲಾಯಿತು. ಬಳಿಕ ಚಾಲಕನನ್ನು ಕೆಳಗಿಳಿಸಲಾಯಿತು. ಮೇಲ್ಪರಂಬ ಭಾಗದಿಂದ ಕ್ರೇನ್ ತಲುಪಿಸಿ ಕೇಬಲ್ ರೋಲ್‌ಗಳನ್ನು ಒಂದೊಂದಾಗಿ ಕೆಳಗಿಳಿಸಲಾಯಿತು. ಅಷ್ಟರಲ್ಲಿ ಒಂದೂವರೆ ಗಂಟೆ ಕಳೆದಿತ್ತು. ಬಳಿಕ ಕ್ಯಾಬಿನ್ ಮುರಿದು ಒಳಗೆ ಸಿಲುಕಿಕೊಂಡಿದ್ದ ಕ್ಲೀನರ್‌ನನ್ನು ಸುರಕ್ಷಿತವಾಗಿ ಹೊರಗಿಳಿಸಿ ತಕ್ಷಣ ಅಗ್ನಿಶಾಮಕದಳದ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ತಲುಪಿಸಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕ್ಲೀನರ್ ಚೇತರಿಸಿಕೊಂಡಿದ್ದಾರೆ.

ಜೀವ ರಕ್ಷಿಸಿದ ಅಗ್ನಿಶಾಮಕ ದಳಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಒಂದೂವರೆ ಗಂಟೆ ಕಾಲ ಮುಂದುವರಿದ ರಕ್ಷಣಾ ಚಟುವಟಿಕೆಗಳ ಮೂಲಕ ಕ್ಲೀನರ್‌ನ ಜೀವ ರಕ್ಷಿಸಿದ ಅಗ್ನಿಶಾಮಕದಳವನ್ನು ನಾಗರಿಕರು ಅಭಿನಂದಿಸಿದ್ದಾರೆ. ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಎಚ್. ಉಮೇಶನ್, ರಾಜೇಶ್ ಪಾವೂರು, ಗೋಕುಲ್ ಕೃಷ್ಣನ್, ಅಮಲ್‌ರಾಜ್, ಅತುಲ್ ರವಿ, ಅಶ್ವಿನ್, ಬಿಬೀಶ್, ರಮೇಶ್, ಚಾಲಕರಾದ ಎಂ. ರಮೇಶ್, ಶಬಿಲ್ ಕುಮಾರ್, ಅನಂತು, ಹೋಂಗಾರ್ಡ್‌ಗಳಾದ ರಾಜೇಂದ್ರನ್, ರಾಕೇಶ್, ಸುಭಾಷ್ ಎಂಬಿವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

RELATED NEWS

You cannot copy contents of this page