ಕುಂಬಳೆ: ವಿದ್ಯುತ್ ದೀಪಗಳು ತಮ್ಮ ಮನೆಯಲ್ಲೂ ಬೆಳಗತೊಡಗುವು ದರೊಂದಿಗೆ ಬಡ ಕುಟುಂಬವೊಂದು ಹಲವು ವರ್ಷಗಳಿಂದ ಬಯಸುತ್ತಿದ್ದ ಆಗ್ರಹ ಕೊನೆಗೂ ಈಡೇರಿದೆ. ಕುಂಬಳೆ ಕುಂಟಂಗೇರಡ್ಕ ಶಾಂತಿನ ಗರದ ಎಸ್‌ಸಿ ಉನ್ನತಿಯ ಅಭಿಮಾನ್ ಎಂಬವರ ಮನೆಗೆ ಕೊನೆಗೂ ವಿದ್ಯುತ್ ಸಂಪರ್ಕ ಲಭಿಸಿದ್ದು, ಇದು ಇವರ ಕುಟುಂಬಕ್ಕೆ ಅತೀ ಸಂತೋಷದ ವಿಷಯವಾಗಿದೆ. ಅಭಿಮಾನ್‌ರ ಮಕ್ಕಳೂ ವಿದ್ಯಾರ್ಥಿಗಳಾದ ಕುಮಾರ, ಅಜಯ್ ಕುಮಾರ್, ಪಂಚಮಿ ಎಂಬಿವರು ದೀಪದ ಬೆಳಕಿನಲ್ಲೇ ಓದಬೇಕಾದ ಸ್ಥಿತಿ ಇದುವರೆಗೆ ಉಂಟಾಗಿತ್ತು. ಮಾತ್ರವಲ್ಲದೆ ಮನೆಯಲ್ಲೂ ಬೆಳಕಿಗಾಗಿ ಚಿಮಿಣಿ ದೀಪ ಅಥವಾ ಮೇಣದ ಬತ್ತಿಗಳನ್ನು ಉರಿಸಬೇಕಾದ ಅನಿವಾರ್ಯತೆ ಈ ಬಡ ಕುಟುಂಬಕ್ಕೆ ಎದುರಾಗಿತ್ತು. ಎಲ್ಲರ ಮನೆಯಲ್ಲೂ ಬೆಳಗುವ ವಿದ್ಯುತ್ ಬೆಳಕು ತಮ್ಮ ಮನೆಯಲ್ಲೂ ಬೆಳಗಬೇಕೆಂಬ ಈ ಬಡ ಕುಟುಂಬದ ಬಯಕೆಯನ್ನು ಇದೀಗ ಬಿಜೆಪಿ ಮಂಡಲ ಅಧ್ಯಕ್ಷ ಬಿ. ವಿಕ್ರಂ ಪೈ ನೇತೃತ್ವದಲ್ಲಿ ಈಡೇರಿಸಿಕೊಡಲಾಗಿದೆ.
ಕಳೆದ ಪಂಚಾಯತ್ ಚುನಾವಣೆಯಲ್ಲಿ ಈ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಬಿ. ವಿಕ್ರಂ ಪೈಯವರು ಮತಯಾಚನೆಗಾಗಿ ಅಭಿಮಾನ್‌ರ ಮನೆಗೆ ಭೇಟಿ ನೀಡಿದಾಗ ತಮ್ಮ ಮನೆಗೆ ಇನ್ನೂ ಕೂಡಾ ವಿದ್ಯುತ್ ಸಂಪರ್ಕ ಲಭಿಸಿಲ್ಲವೆಂದು ಅಭಿಮಾನ್ ತಮ್ಮ ಸಂಕಷ್ಟವನ್ನು ವಿವರಿಸಿದ್ದರು. ವಿದ್ಯುತ್ ಲಭಿಸದುದರಿಂದ ಮನೆಯ ದೈನಂದಿನ ಚಟುವಟಿಕೆ ಹಾಗೂ ಮಕ್ಕಳ ಕಲಿಕೆಗೆ ಸಮಸ್ಯೆಯಾಗಿ ಪರಿಣಮಿಸಿದೆಯೆಂದು ಅಭಿಮಾನ್ ಅಭ್ಯರ್ಥಿಯೊಂದಿಗೆ ತಿಳಿಸಿದ್ದರು. ಅಭಿಮಾನ್‌ರ ಅಹವಾಲನ್ನು ಆಲಿಸಿದ ವಿಕ್ರಂ ಪೈಯವರು ಮನೆಗೆ ವಿದ್ಯುತ್ ಸಂಪರ್ಕ ದೊರಕಿಸಿಕೊಡುವ ಭರವಸೆಯನ್ನಿತ್ತು ಅಲ್ಲಿಂದ ಮರಳಿದ್ದರು. ಇದರಂತೆ ಚುನಾವ ಣೆಯ ಪ್ರಚಾರದ ಮಧ್ಯೆಯೂ ವಿಕ್ರಂ ಪೈಯವರು ವಿದ್ಯುತ್ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅಭಿಮಾನ್‌ರ ಮನೆಗೆ ವಿದ್ಯುತ್ ಸಂಪರ್ಕ ದೊರಕಿಸಲಿರುವ ಕ್ರಮಗಳ ನ್ನು ಆರಂಭಿಸಿದ್ದರು. ಇದಕ್ಕಾಗಿ ಮನೆಗೆ ವಯರಿಂಗ್ ಕೆಲಸಗಳನ್ನು ಅವರು ನಡೆಸಿಕೊಟ್ಟಿದ್ದಾರೆ. ಆದರೆ ಅನಂತರ ಸುರಿದ ಮಳೆ ಹಾಗೂ ಇನ್ನಿತರ ಕಾರಣಗಳಿಂದ ಮನೆಗೆ ವಿದ್ಯುತ್ ಸಂಪರ್ಕ ನೀಡಲು ವಿಳಂಬವಾಯಿತು. ಇದೀಗ ಅಭಿಮಾನ್‌ರ ಮನೆಗೆ ವಿದ್ಯುತ್ ಸಂಪರ್ಕ ದೊರಕಿದೆ. ಬಿಜೆಪಿ ನೇತಾರರಾದ ಬಿ. ವಿಕ್ರಂ ಪೈ, ವಿ. ರವೀಂದ್ರನ್, ಪಂಚಾಯತ್ ಸಮಿತಿ ಅಧ್ಯಕ್ಷರಾದ ಸುಜಿತ್ ರೈ, ಶಿವಪ್ರಸಾದ್ ರೈ, ಪಂ. ಸದಸ್ಯರಾದ ಕಾಂಜಾರ, ಅಮಿತ್ ಆಳ್ವ, ಅಜಿತ್, ಶಾರದ, ಕಚೇರಿ ಕಾರ್ಯದರ್ಶಿ ವಿನೋದ್ ಕುಮಾರ್, ಸಂತೋಷ್, ಗಣೇಶ್, ವಿವೇಕಾನಂದ ಎಂಬಿವರು ಅಭಿಮಾನ್‌ರ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಸಂತೋಷ ವನ್ನು ಹಂಚಿಕೊಂಡರು.
ಮನೆಗೆ ವಿದ್ಯುತ್ ಸಂಪರ್ಕ ದೊರಕಲು ಪ್ರಯತ್ನಿಸಿದ ವಿಕ್ರಂ ಪೈ ಹಾಗೂ ಬಿಜೆಪಿ ನೇತಾರರಿಗೆ ಅಭಿಮಾನ್‌ರ ಕುಟುಂಬ ಕೃತಜ್ಞತೆ ಸಲ್ಲಿಸಿದೆ.






