ನೀರ್ಚಾಲು: ಸಾಯಿಮಂದಿರ ಮುಗುರಸ್ತೆ ಹಾಗೂ ಉರ್ಲಿತ್ತಡ್ಕ ಬೇಳ ರಸ್ತೆಯು ಶೋಚನೀಯಾವಸ್ಥೆಯಲಿದೆ ಎಂದು ನಾಗರಿಕರು ದೂರುತ್ತಿದ್ದಾರೆ. 20 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಸದಿರುವುದರಿಂದ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿದೆ. ಇತ್ತೀಚೆಗೆ ಜಲಪ್ರಾಧಿಕಾರ ರಸ್ತೆಯ ಎರಡೂ ಬದಿಗಳಲ್ಲಿ ಪೈಪ್ ಅಳವಡಿಸಲು ಹೊಂಡಗಳನ್ನು ತೋಡಿ ಅದನ್ನು ಸಮರ್ಪಕವಾದ ರೀತಿಯಲ್ಲಿ ಮುಚ್ಚದಿರುವುದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಮಳೆಗಾಲ ಪ್ರಾರಂಭವಾದಲ್ಲಿ ಈ ರಸ್ತೆ ಮೂಲಕ ಸಂಚಾರ ದುಸ್ತರವಾಗಲಿದೆ.
20 ವರ್ಷಗಳಿಂದ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡಿದ್ದರೂ ಇಲಾಖೆಯು ಮೌನವಹಿಸಿದೆ. ಲೋಕೋಪಯೋಗಿ ಇಲಾಖೆಯು ಎರಡು ತಿಂಗಳ ಹಿಂದೆಯೇ ಹಣ ಮಂಜೂರಾಗಿದೆ ಮತ್ತು ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಮಾಹಿತಿ ನೀಡಿದ್ದರೂ, ಇದುವರೆಗೆ ಯಾವುದೇ ಕಾಮಗಾರಿ ಆರಂಭಗೊAಡಿಲ್ಲ. ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಗ್ರಾಮಸ್ಥರು ಮತ್ತು ವಾಹನ ಮಾಲಿಕರು ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.






