ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 62 ಕಿಲೋ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಉಳಿಯತ್ತಡ್ಕ ನೇಶನಲ್ ನಗರ ನಿವಾಸಿ ಬಿಸ್ಮಿಲ್ಲಾ ಮಂಜಿಲ್ನ ಹನೀಫಾ (38) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರ್ನಾಕುಳಂ ಜಿಲ್ಲೆಯ ಅಂಗಮಾಲಿ ಟಿ.ಬಿ. ಜಂಕ್ಷನ್ ಬಳಿ ಎರ್ನಾಕುಳಂ ರೂರಲ್ ಜಿಲ್ಲಾ ಡಾನ್ಸಾಪ್ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ. ಕಾರಿನ ಹಿಂದಿನ ಭಾಗದ ಆಸನದ ಒರಗುವ ಭಾಗದಲ್ಲಿ ಗುಪ್ತ ಸೆರೆ ತಯಾರಿಸಿ ಅದರೊಳಗೆ ಈ ಮಾಲಕನ್ನು ಬಚ್ಚಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾವನ್ನು ಪ್ಲಾಸ್ಟಿಕ್ ಶೀಟ್ನಲ್ಲಿ ೩೧ ಪೊಟ್ಟಣಗಳಲ್ಲಾಗಿ ಕಟ್ಟಿ ಇರಿಸಲಾಗಿತ್ತು. ಕಾರಿನ ಹಿಂದಿನ ಭಾಗದ ಸೀಟಿನಲ್ಲಿ ತಯಾರಿಸಲಾಗಿದ್ದ ಗುಪ್ತ ಸೆರೆಯಿಂದ ಈ ಮಾಲನ್ನು ಪೊಲೀಸರು ಹೊರತೆಗೆದಿದ್ದಾರೆ. ಈ ಗಾಂಜಾವನ್ನು ಆರೋಪಿ ಕಾರಿನಲ್ಲಿ ಒಡಿಶಾದಿಂದ ತರುತ್ತಿದ್ದನೆಂದೂ, ಅದನ್ನು ಆತ ಕೋಟ್ಟಯಂಗೆ ಸಾಗಿಸಲೆತ್ನಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಒಡಿಶಾದಿಂದ ಭಾರೀ ಪ್ರಮಾಣ ದಲ್ಲಿ ಗಾಂಜಾ ಇತ್ಯಾದಿಗಳನ್ನು ಕೇರಳಕ್ಕೆ ಸಾಗಿಸುವ ಹಲವು ತಂಡಗಳು ಕಾರ್ಯ ವೆಸಗುತ್ತಿವೆ. ಈ ತಂಡಗಳು ಅಲ್ಲಿಂದ ಗಾಂಜಾ ಖರೀದಿಸಿ ಅವುಗಳನ್ನು ವಾಹನ ಗಳಲ್ಲಿ ಪೊಲೀಸರ ಕಣ್ಣಿಗೆ ಬೀಳದ ರೀತಿಯಲ್ಲಿ ಒಳದಾರಿಗಳ ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.






