ದಲಿತ ಸಂಘಟನೆಗಳ ಹರತಾಳ : ಕಾಸರಗೋಡಿನಲ್ಲಿ ಅಬಾಧಿತ

ಕಾಸರಗೋಡು: ಅಂಜರಕಂಡಿ ನಿವಾಸಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿತಿನ್‌ರಾಜ್‌ನ ಆತ್ಮಹತ್ಯೆಗೆ ಕಾರಣರಾದವರನ್ನೆಲ್ಲಾ ಬಂಧಿಸಿ ಅವರ ವಿರುದ್ಧ ಕಾನೂನುಪರ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಮುಂದಿರಿಸಿ ಜಸ್ಟೀಸ್ ಫಾರ್ ನಿತಿನ್‌ರಾಜ್ ಆಕ್ಷನ್ ಕೌನ್ಸಿಲ್ ಮತ್ತು ದಲಿತ್ ಆದಿವಾಸಿ (ಬುಡಕಟ್ಟು) ಸಂಘಟನೆಗಳ ನೇತೃತ್ವದಲ್ಲಿ ರಾಜ್ಯದಲ್ಲಿ  ಇಂದು ಹರತಾಳ ಆಚರಿಸಲಾಗುತ್ತಿದೆ. ರಾಜ್ಯದ ಒಟ್ಟು ೫೨ ದಲಿತ ಸಂಘಟನೆಗಳ ಸಹಕಾರದೊಂದಿಗೆ ಇಂದು ಬೆಳಗ್ಗಿನಿಂದ ಹರತಾಳ ಆರಂಭಗೊಂಡಿದ್ದು ಸಂಜೆ ತನಕ ಮುಂದುವರಿಯಲಿದೆ. ಹರತಾಳ ವೇಳೆ ವಾಹನಗಳನ್ನು ತಡೆಯ ಲಾಗುವುದಿಲ್ಲವೆಂದು ಹರತಾಳಕ್ಕೆ ಕರೆ ನೀಡಿದ ಸಂಘಟನೆಗಳು ತಿಳಿಸಿದ್ದರೂ ರಾಜ್ಯದ  ಹೆಚ್ಚಿನೆಡೆಗಳಲ್ಲಿ ಹರತಾಳ ನಿರತರು ಬಸ್‌ಗಳು ಸೇರಿದಂತೆ ಇತರ ವಾಹನಗಳನ್ನು  ತಡೆಯೊಡ್ಡಿದ್ದು ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂದಿದೆ. ರಾಜ್ಯದ ಹಲವೆಡೆಗಳಲ್ಲಿ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಲಾಗಿದೆ.

ಇದೇ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯಲ್ಲ್ಲಿ ಹರತಾಳ ಹೆಚ್ಚಿನ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಜಿಲ್ಲೆಯ ಪಡನ್ನಕ್ಕಾಡು, ಬಂದಡ್ಕ, ಪೆರಿಯ ಎಂಬೆಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಇಂದು ಬೆಳಿಗ್ಗೆ ಬಸ್ ಸೇರಿದಂತೆ ವಾಹನಗಳನ್ನು ಹರತಾಳ ನಿರತರು ತಡೆಯೊಡ್ಡಿದ್ದಾರೆ. ಇದರಿಂದಾಗಿ ವಾಹನ ಚಾಲಕರು  ಸರ್ವೀಸ್ ರಸ್ತೆ  ಬದಲು ಮುಖ್ಯರಸ್ತೆ ಮೂಲಕ ಸಂಚಾರ ಆರಂಭಿಸಿದ್ದಾರೆ.

ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಹರತಾಳ ಯಾವುದೇ ರೀತಿಯ ಪರಿಣಾಮ ಬೀರಿಲ್ಲ.  ಈ ಎರಡೂ ತಾಲೂಕುಗಳಲ್ಲಿ ವಾಹನಗಳು ಎಂದಿನಂತೆ ಸೇವೆ ನಡೆಸುತ್ತಿವೆ. ಮಾತ್ರವಲ್ಲದೆ ಎಲ್ಲಾ ವ್ಯಾಪಾರ ಸಂಸ್ಥೆಗಳು ಹಾಗೂ ಕಚೇರಿಗಳು ಎಂದಿನಂತೆ ತೆರೆದು ಕಾರ್ಯವೆಸಗುತ್ತಿವೆ. ಆದರೂ ಎಲ್ಲೆಡೆ ಪೊಲೀಸರು ತೀವ್ರ ಮುಂಜಾಗ್ರತಾ ಕ್ರಮ ಏರ್ಪಡಿಸಿದ್ದಾರೆ.

You cannot copy contents of this page