ಕುಂಬಳೆಯಲ್ಲಿ ಬಸ್ ತಂಗುದಾಣ ವಿವಾದ: ಸಂಚಾರ ಮೊಟಕುಗೊಳಿಸಿ ಪ್ರತಿಭಟನೆ

ಕುಂಬಳೆ: ಪಂಚಾಯತ್ ಆಡಳಿತ ಸಮಿತಿ ಅವರವರ ಆಸಕ್ತಿಗನುಸಾರವಾಗಿ ತೆಗೆಯುವ ತೀರ್ಮಾನಗಳು ಕುಂಬಳೆಯಲ್ಲಿ ಖಾಸಗಿ ಬಸ್ ಸಂಚಾರ ವ್ಯವಸ್ಥೆಯನ್ನು ನಿಶ್ಚಲಗೊಳಿಸಿದೆಯೆಂದು ದೂರಲಾಗಿದೆ.

ಕಳೆದ ಪಂಚಾಯತ್ ಆಡಳಿತ ಸಮಿತಿ ಪೇಟೆಯಲ್ಲಿನ ವಾಹನ ದಟ್ಟಣೆಯನ್ನು  ಕಡಿಮೆ ಮಾಡಲು ಕುಂಬಳಯಿಂದ ವಿವಿಧ ಭಾಗಗಳಿಗೆ ಸಂಚಾರ ನಡೆಸುವ ಬಸ್ ಗಳಿಗೆ ಪೇಟೆಯ ವಿವಿಧ ಭಾಗಗಳಲ್ಲಿ ಶೆಲ್ಟರ್ ನಿರ್ಮಿಸಲಾಗಿತ್ತು. ಅಂದು ಅದರ ವಿರುದ್ಧ ವಿವಿಧ ಮೂಲಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೂ ಆಡಳಿತ ಸಮಿತಿ ಕೈಗೊಂಡ ತೀರ್ಮಾನ ದಲ್ಲಿ ಗಟ್ಟಿಯಾಗಿ ನಿಂತಿತು. ಪಂಚಾಯತ್ ಚುನಾವಣೆ ಕಳೆದ ಕೂಡಲೇ ಅಂದಿನ ಪಂಚಾಯತ್ ತೀರ್ಮಾನದ ವಿರುದ್ಧ ಪ್ರತಿಕ್ರಿಯಿಸಿದವರು ಮತ್ತೆ ಮನವಿಯೊಂದಿಗೆ ಆಡಳಿತ ಸಮಿತಿಯನ್ನು ಸಮೀಪಿಸಿದ್ದು,  ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿಯ ಬಸ್ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಬೇಕಾಗಿದ್ದ ಬಸ್‌ಗಳನ್ನು ಕುಂಬಳೆಯಲ್ಲಿ ಹಿಂದೆ ಇದ್ದ ಬಸ್ ನಿಲ್ದಾಣದಲ್ಲಿ ಪಾರ್ಕ್ ಮಾಡಬಹುದೆಂದು ತೀರ್ಮಾ ನಿಸಲಾಗಿದೆಯೆಂದು ಹೇಳಲಾಗುತ್ತಿದೆ. ಪಂಚಾಯತ್ ಆಡಳಿತ ಸಮಿತಿಯಲ್ಲಿನ ಒಂದು ವಿಭಾಗ ಹಾಗೂ ವ್ಯಾಪಾರಿಗಳು ಸೇರಿ ಈ ತೀರ್ಮಾನ ಕೈಗೊಂಡಿರುವುದಾಗಿ ಹೇಳಲಾಗಿದೆ. ಈ ತೀರ್ಮಾನ ಸಭೆಯಲ್ಲಿ ಬಸ್ ಮಾಲಕರನ್ನು, ಪ್ರಯಾಣಿಕರ ಪ್ರತಿನಿಧಿಗಳನ್ನು ಪೊಲೀಸರನ್ನು ಪಾಲ್ಗೊಳಿಸಲಾಗಿಲ್ಲವೆಂದು ಹೇಳಲಾಗಿದೆ. ಆದ್ದರಿಂದ ಪಂಚಾಯತ್ ತೀರ್ಮಾನವನ್ನು ಬಸ್ ಮಾಲಕರು ತಿರಸ್ಕರಿಸಿರುವುದಾಗಿ ಹೇಳಲಾಗಿದೆ.

ಈಮಧ್ಯೆ ನಿನ್ನೆ ವ್ಯಾಪಾರಿ ಯೂತ್ ವಿಂಗ್ ಸದಸ್ಯರ ಒಂದು ತಂಡ ಸೀತಾಂಗೋಳಿಯಿಂದ ಸ್‌ಗೆ ಹತ್ತಿ ಕುಂಬಳೆ ಬಸ್ ನಿಲ್ದಾಣಕ್ಕೆ ಟಿಕೆಟ್ ತೆಗೆದಿದ್ದು, ಬಸ್ ಕುಂಬಳೆ ಸಹಕಾರಿ ಆಸ್ಪತ್ರೆ ಬಳಿ ನಿಂತಾಗ ಕುಂಬಳೆ ಬಸ್ ನಿಲ್ದಾಣದವರೆಗೆ ಸಂಚರಿಸಬೇಕೆಂದು ಹಠಹಿಡಿದು ಗಲಾಟೆ ಮಾಡಿದರೆನ್ನಲಾಗಿದೆ. ಇದರಿಂದ ಜನ ಸೇರಿದ್ದು, ಎಲ್ಲಾ ಬಸ್ ಸಂಚಾರ ಮೊಟಕುಗೊಂಡಿದೆ.  ಬಸ್‌ಗಳನ್ನು ಸುಗಮವಾಗಿ ನಿಲ್ಲಿಸಲು, ತಿರುಗಿಸಲು, ಕಾರ್ಮಿಕರ ಪ್ರಾಥಮಿಕ ಸೌಕರ್ಯ ಏರ್ಪಡಿಸಿದುದಾಗಿರಬೇಕು ಬಸ್ ನಿಲ್ದಾಣವೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ದಿನದಲ್ಲಿ ಒಂದು ಕಡೆ ಬಸ್ ನಿಲ್ದಾಣವನ್ನು ಬದಲಿಸಿದರೆ ಅದಕ್ಕನುಸಾರವಾಗಿ ಬಸ್ ಓಡಿಸಲು ಸಾಧ್ಯವಿಲ್ಲವೆಂದು ಬಸ್ ಕಾರ್ಮಿಕರು ಮುನ್ನೆಚ್ಚರಿಕೆ ನೀಡಿದ್ದಾರೆ. ಬಸ್ ಕಾರ್ಮಿಕರ ನಿಲುವನ್ನು ಆಟೋ ರಿಕ್ಷಾ ಚಾಲಕರು ಕೂಡಾ ಬೆಂಬಲಿಸಿದ್ದಾರೆ.

You cannot copy contents of this page