ಕಾಸರಗೋಡು: ಮಾರ್ಚ್ 10ರಂದು ನಗರದ ನುಳ್ಳಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹು ಅಂತಸ್ತಿನ ಕಟ್ಟಡದ ಲಿಫ್ಟ್ಗಾಗಿ ನಿರ್ಮಿಸಲಾಗುತ್ತಿದ್ದ ಹೊಂಡದ ನೀರಿನಲ್ಲಿ ಕೊಲೆಗೈಯ್ಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕರ್ನಾಟಕ ವಲಸೆ ಕಾರ್ಮಿಕ ಗದಗ ಜಿಲ್ಲೆಯ ಬಲೇಶ್ವರ ಬಾಲ ಹೊಸೂರು ನಿವಾಸಿ ಚಂದ್ರ ಶೇಖರ ಸುರೇಶ್ ಪಟ್ಟಾಡ್ (38)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಮೂಲತಃ ಕರ್ನಾಟಕ ಗದಗ ಜಿಲ್ಲೆಯ ಅಟ್ಟಿಗೇರಿ ಲಕ್ಷೇಶ್ವರ ನಿವಾಸಿ ಹಾಗೂ ಈಗ ಕರ್ನಾಟಕ ದಾರವಾಡ ಜಿಲ್ಲೆಯ ಕುಂದಗೋಲ್ನಲ್ಲಿ ವಾಸಿಸುತ್ತಿರುವ ಹನುಮಂತಪ್ಪ ಎಂಬವರ ಮಗ ಮಂಜುನಾಥ ಎಂ. ಹಟ್ಟಿಗೆರೆ ಅಲಿಯಾಸ್ ಮಂಜಪ್ಪ (45) ಬಂಧಿತ ಆರೋಪಿ. ಕೊಲೆ ನಡೆದ ಬಳಿಕ ಆರೋಪಿ ಕಾಸರಗೋಡು ಬಿಟ್ಟಿದ್ದನು. ಮಾತ್ರವಲ್ಲ ಬಳಿಕ ಆತ ಹಲವೆಡೆಗಳಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದನು. ಆತನ ಮೇಲೆ ಪೊಲೀಸರು ಸದಾ ನಿಗಾ ಇರಿಸಿಕೊಂಡಿದ್ದರು. ಅದರ ಫಲವಾಗಿ ಆತನನ್ನು ಕರ್ನಾಟಕದಿಂದ ಬಂಧಿಸುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಬಂಧಿತನು ಕಾಸರಗೋಡಿನಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೈಯ್ಯಲ್ಪಟ್ಟ ಚಂದ್ರಶೇಖರ ಸುರೇಶ್ ಪಟ್ಟಾಡ್ ಆರೋಪಿಗೆ 2000 ರೂ. ಸಾಲದ ಹಣ ನೀಡಲು ಬಾಕಿ ಇತ್ತೆಂದೂ ಅದರ ಹೆಸರಲ್ಲಿ ಅವರ ಮಧ್ಯೆ ಪರಸ್ಪರ ಜಗಳವುಂಟಾಗಿ ಆ ದ್ವೇಷದಿಂದ ಆರೋಪಿ ಚಂದ್ರಶೇಖರ್ ಪಟ್ಟಾಡ್ನ ತಲೆಗೆ ಹೊಡೆದು ಕೊಲೆಗೈದಿದ್ದನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ನಡೆದ ಸ್ಥಳದಿಂದ ಪೊಲೀಸರಿಗೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೋನ್ ಲಭಿಸಿತ್ತು. ಅದು ಕರ್ನಾಟಕದ ಮಂಜುನಾಥ ಎಂಬ ಇನ್ನೋರ್ವ ಕಾರ್ಮಿಕನ ಆಧಾರ್ ಕಾರ್ಡ್ ಆಗಿತ್ತು. ಅದರಂತೆ ಪೊಲೀಸರು ಆತನನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸಿದಾಗ ಆತನಿಗೂ ಕೊಲೆಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಸ್ಪಷ್ಟಗೊಂಡಿತ್ತು.






