ಉಪ್ಪಳ: ಎಟಿಎಂಗೆ ಹಣ ತುಂಬಿಸಲು ಬಂದ ವಾಹನದಿಂದ 50 ಲಕ್ಷ ರೂಪಾಯಿ ಕಳವು ನಡೆಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಸೆರೆಗೀಡಾಗಿದ್ದಾನೆ. ತಮಿಳುನಾಡು ತಿರುಚ್ಚಿರಾಪಳ್ಳಿ ದಿಂಡಿಗಲ್ ಮೈನ್ ರೋಡ್ ರಾಮ್ಜಿ ನಗರದ ಅರುಮುಗನ್ ಯಾನೆ ಕಿಟ್ಟು (55) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಮಂಜೇಶ್ವರ ಎಸ್ಐ ದಿನೇಶ್ರಾಜನ್ ನೇತೃತ್ವದ ಪೊಲೀಸರು ನಿನ್ನೆ ಛತ್ತೀಸ್ಘಡದಿಂದ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಮಂಜೇಶ್ವರ ಪೊಲೀಸ್ ಠಾಣೆಗೆ ತಲುಪಿಸಲಾಗಿದೆ.
2024 ಮಾರ್ಚ್ 27ರಂದು ಮಧ್ಯಾಹ್ನ 2 ಗಂಟೆಗೆ ಉಪ್ಪಳ ಪೇಟೆಯ ಆಕ್ಸಿಸ್ ಬ್ಯಾಂಕ್ನ ಎಟಿಎಂಗೆ ಹಣ ತುಂಬಿಸಲು ಬಂದ ವಾಹನದಿಂದ ೫೦ ಲಕ್ಷ ರೂಪಾಯಿಗಳನ್ನು ಕಳವು ನಡೆಸಲಾಗಿದೆ. ವಾಹನವನ್ನು ಎಟಿಎಂನ ಮುಂಭಾಗದ ರಸ್ತೆ ಬದಿ ನಿಲ್ಲಿಸಿ ಅದರ ಚಾಲಕ ಹಾಗೂ ಹಣ ತುಂಬಿಸುವ ವ್ಯಕ್ತಿ ಕೌಂಟರ್ಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಆರೋಪಿಗಳು ವಾಹನದ ಗಾಜು ಪುಡಿಗೈದು ಹಣ ಒಳಗೊಂಡಿದ್ದ ಪೆಟ್ಟಿಗೆಯನ್ನು ಕಳವುಗೈದು ಪರಾರಿಯಾಗಿದ್ದರು. ಈ ಬಗ್ಗೆ ಎಟಿಎಂ ಕೌಂಟರ್ಗೆ ಹಣ ತುಂಬಿಸುವ ಹೊಣೆಗಾರಿಕೆ ವಹಿಸಿದ್ದ ಉಳಿಯತ್ತಡ್ಕ ನಿವಾಸಿ ಯತೀಂದ್ರ ಎಂಬವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಬಳಿಕ ಪೊಲೀಸರು ಘಟನೆ ಸ್ಥಳ ಸಹಿತ ವಿವಿಧೆಡೆಗಳ ಸಿಸಿ ಟಿವಿಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಗುರುತು ಪತ್ತೆಯಾಗಿತ್ತು. ಇದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದರು. ಹಣ ಕಳವು ನಡೆಸಿದ ಬಳಿಕ ಪರಾರಿಯಾಗಿದ್ದ ತಮಿಳುನಾಡು ನಿವಾಸಿಗಳಾದ ಮುತ್ತು ಕುಮಾರ್ ಹಾಗೂ ಕಾರ್ವರನ್ ಎಂಬಿಬ್ಬರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಇವರನ್ನು ತನಿಖೆಗೊಳಪಡಿಸಿದಾಗ ಅರುಮುಗನ್ ಕೂಡಾ ಈ ಕಳವು ಪ್ರಕರಣದಲ್ಲಿ ಒಳಗೊಂಡಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಈತನಿಗಾಗಿ ವಿವಿಧೆಡೆ ಶೋಧ ನಡೆಸಲಾಗಿತ್ತು. ಇದೇ ವೇಳೆ ಅರುಮುಗನ್ ಛತ್ತೀಸ್ಘಡ್ನಲ್ಲಿ ಇದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಇದರಂತೆ ಮಂಜೇಶ್ವರ ಎಸ್ಐ ದಿನೇಶ್ರಾಜನ್ ನೇತೃತ್ವದಲ್ಲಿ ಪೊಲೀಸರಾದ ದಿನೇಶ್, ಚಂದ್ರಕಾಂತ್, ಸಂದೀಪ್ ಎಂಬಿವರು ಛತ್ತೀಸ್ಘಡ್ಗೆ ತೆರಳಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಅರುಮುಗನ್ ಪತ್ತೆಯಾಗಿದ್ದಾನೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.






