ಕೊಲ್ಕತ್ತ: ಪಶ್ಚಿಮಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಯಾನಕ ರಕ್ತಪಾತದ ಅಧ್ಯಾಯ ಆರಂಭಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಈ ಸಮಯದಲ್ಲಿ, ಶನಿವಾರದಂದು ಪಶ್ಚಿಮಬಂಗಾಳದ ಹೊಸ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸುವ ಮೊದಲೇ ಅವರನ್ನು ಹತ್ಯೆಗೈಯ್ಯಲು ದಾಳಿಕೋರರು ಸ್ಕೆಚ್ ಹಾಕಿದ್ದು ಅದು ವಿಫಲಗೊಂಡಾಗ ಅವರ ಆಪ್ತನನ್ನೇ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಈ ಘಟನೆ ರಾಜ್ಯದ ರಾಜಕೀಯ ವಾತಾವರಣವನ್ನು ಇನ್ನಷ್ಟು ಕದಡಿಸುವಂತೆ ಮಾಡಿದೆ.
ನಿಯುಕ್ತ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಹಾಗೂ ಮಾಜಿ ವಾಯುಪಡೆಯ ಸಿಬ್ಬಂದಿ ಚಂದ್ರನಾಥ್ ರಥರನ್ನು ಮಧ್ಯಮ ಗ್ರಾಮದ ಬಳಿ ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಈ ಹತ್ಯೆ ನಡೆದ ರೀತಿ, ಬಳಸಿದ ಶಸ್ತ್ರಾಸ್ತ್ರಗಳು ದಾಳಿಕೋರರ ಸಂಖ್ಯೆಯನ್ನೆಲ್ಲಾ ಅವಲೋಕಿಸಿದಾಗ ಇದು ರಾಜಕೀಯ ಹತ್ಯೆ ಎಂಬುವುದು ಸ್ಪಷ್ಟಗೊಳ್ಳುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದ್ರನಾಥ್‌ರಥ ನಿನ್ನೆ ರಾತ್ರಿ 11 ಗಂಟೆಗೆ ಕೊಲ್ಕತ್ತದಿಂದ ಮಧ್ಯಮ ಗ್ರಾಮಕ್ಕೆ ಬಿಳಿ ಸ್ಕಾರ್ಫಿಯೋ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಆ ಕಾರಿನ ಮೇಲೆ ವೆಸ್ಟ್ ಬೆಂಗಾಲ್ ಲೆಜಿಸ್ಲೇಟಿವ್ ಅಸೆಂಬ್ಲಿ ಎಂಬ ಫಲಕ ಲಗತ್ತಿಸಲಾಗಿತ್ತು. ಇದು ನಿಯುಕ್ತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬಳಸುವ ವಾಹನವನ್ನೇ ಹೋಲುತ್ತಿತ್ತು. ದಾಳಿಕೋರರು ಕಾರಿನ ಒಳಗೆ ಸುವೇಂದು ಅಧಿಕಾರಿ ಇದ್ದಾರೆಂದು ಭಾವಿಸಿ ಅದರ ಮೇಲೆ ಗುಂಡಿನ ದಾಳಿ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಆ ಕಾರಿನಲ್ಲಿದ್ದ ಚಂದ್ರನಾಥ್ ರಥ ಅವರು ಗುಂಡಿನ ದಾಳಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಮಧ್ಯಮ ಗ್ರಾಮದ ದೊಹಾರಿಯ ಬಳಿ ದಾಳಿಕೋರರು ಚಂದ್ರನಾಥ್ ರಥ ಸಂಚರಿಸಿದ ಕಾರನ್ನು ಬಹಳ ದೂರದಿಂದಲೇ ಹಿಂಬಾಲಿಸಿಕೊಂಡು ಬಂದು ಆ ಪೈಕಿ ಒಂದು ಸಣ್ಣ ಕಾರು ಹಠಾತ್ ಆಗಿ ಚಂದ್ರನಾಥ್ ರಥ ಚಲಾಯಿಸುತ್ತಿದ್ದ ಕಾರಿನ ಮುಂದೆ ಬಂದು ಅದನ್ನು ತಡೆದು ನಿಲ್ಲಿಸಿದೆ. ನಂತರ ನಾಲ್ಕು ಬೈಕ್‌ಗಳಲ್ಲಾಗಿ ಬಂದ ೮ ಶೂಟರ್‌ಗಳು ಕಾರಿನ ಕಿಟಿಕಿಯ ಮೇಲೆ ನೇರವಾಗಿ ಗುಂಡು ಹಾರಿಸಿದ್ದಾರೆ. ಗಾಳಿ ಅದೆಷ್ಟು ಭೀಕರವಾಗಿತ್ತು ಅಂದರೆ ಚಂದ್ರನಾಥ್‌ರಿಗೆ ಚೇತರಿಸಿಕೊಳ್ಳಲು ಅವಕಾಶವೇ ಇರಲಿಲ್ಲ. ಇದು ಸಾಮಾನ್ಯ ಜಗಳ ಅಥವಾ ಆಕಸ್ಮಿಕ ದಾಳಿಯಲ್ಲ. ಯುದ್ದೋಪಹಾದಿಯಲ್ಲಿ ನಡೆಸಿದ ಮುತ್ತಿಗೆಯೇ ಆಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಂತಕರ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.







