ಕೃಷಿ ತೋಟದಲ್ಲಿ ಕಣಜದ ಹುಳು ದಾಳಿ: ಅಧ್ಯಾಪಕ ಮೃತ್ಯು; ನಾಲ್ವರು ಕಾರ್ಮಿಕರಿಗೆ ಗಾಯ

ಕಾಸರಗೋಡು: ಕೃಷಿ ತೋಟದ ಪೊದೆಗಳನ್ನು ಕಡಿಯುತ್ತಿದ್ದ ವೇಳೆ ಕಣಜದ ಹುಳುಗಳ   ದಾಳಿಗೊಳಗಾಗಿ ಅಧ್ಯಾಪಕ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ನಡೆದಿದೆ. ಪನತ್ತಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ರಾಜಪುರಕ್ಕೆ ಸಮೀಪದ ಬಳಾಂತೋಡು ಚಾಮುಂಡಿಕುನ್ನು ನಿವಾಸಿ ಸಿ. ವಿಜಯ್ ಕುಮಾರ್ (56) ಸಾವನ್ನಪ್ಪಿದ ದುರ್ದೈವಿ. ಆ ವೇಳೆ ಇವರ ಜತೆಗಿದ್ದ ಕಾರ್ಮಿಕರಾದ ತುಂಬೋಡಿ ನಿವಾಸಿಗಳಾದ ನಂದಕುಮಾರ್ (41), ರಾಘವನ್ (70), ಕೇಶವನ್ (53) ಮತ್ತು  ಚಂದ್ರನ್ (50) ಎಂಬವರ ಮೇಲೂ ಕಣಜದ ಹುಳ ದಾಳಿ ನಡೆಸಿದ ಪರಿಣಾಮ ಅವರೂ ಗಾಯಗೊಂಡಿದ್ದಾರೆ.

ವಿಜಯ್ ಕುಮಾರ್ ನಿನ್ನೆ ಬೆಳಿಗ್ಗೆ 10.30ರ ವೇಳೆಗೆ ಚಾಮುಂಡಿಕುನ್ನು ಕಿಳಕ್ಕೇ ತುಂಬೋಕ್‌ನಲ್ಲಿರುವ ತಮ್ಮ ಕೃಷಿ ತೋಟಕ್ಕೆ ಇತರ ಕಾರ್ಮಿಕರೊಂದಿಗೆ  ತೆರಳಿ ಪೊದೆಗಳನ್ನು ಕಡಿದು ಶುಚೀಕರಿಸುವ ಕೆಲಸದಲ್ಲಿ ತೊಡಗಿದಾಗ, ಅಲ್ಲೇ ಪೊದೆಯಲ್ಲಿದ್ದ ಗೂಡಿನಿಂದ ಕಣಜದ ಹುಳುಗಳು ದಾಳಿ ನಡೆಸಿವೆ. ಆಗ ವಿಜಯ್ ಕುಮಾರ್ ಮತ್ತು ಇತರ ಕಾರ್ಮಿಕರು ಅತ್ತಿತ್ತ ಚೆಲ್ಲಾಪಿಲ್ಲಿಯಾಗಿ ಓಟಕಿತ್ತರು. ಬಳಿಕ ಕಾರ್ಮಿಕರು ಮೊಬೈಲ್ ಫೋನ್‌ನಲ್ಲಿ ವಿಜಯ್ ಕುಮಾರ್‌ರನ್ನು ಸಂ ಪರ್ಕಿಸಲೆತ್ನಿಸಿದರೂ ಸಾಧ್ಯ ವಾಗಲಿಲ್ಲ. ಆ ಬಳಿಕ ಕಾರ್ಮಿಕರು ಊರವರ ಸಹಾಯದಿಂದ ವ್ಯಾಪಕ ಶೋಧ ಆರಂಭಿಸಿದಾಗ ತೋಟದ ತೆಂಗಿನ ಮರವೊಂದರ ಬುಡದಲ್ಲಿ ವಿಜಯ್ ಕುಮಾರ್‌ರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು.  ತಕ್ಷಣ ಅವರನ್ನು ಬಂದಡ್ಕದ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ವಿಜಯ್ ಕುಮಾರ್ ಈ ತಿಂಗಳ ೩೧ರಂದು ಅಧ್ಯಾಪಕ ಸೇವೆಯಿಂದ ನಿವೃತ್ತರಾಗಲಿ ರುವಂತೆಯೇ ಈ ಸಾವು ಸಂಭವಿಸಿದೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ   ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ದಿ| ಚಂದ್ರಶೇಖರನ್ ನಾಯರ್- ರತ್ನಮ್ಮ ದಂಪತಿ ಪುತ್ರನಾದ ಮೃತರು ಪತ್ನಿ ಶ್ರೀಜ, ಮಕ್ಕಳಾದ ಅಂಜನಾ ಅಖಿಲ್, ವಿಷ್ಣು ವಿಜಯನ್, ಅಳಿಯ ಡಾ. ಅಖಿಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page