ಉಪ್ಪಳ: ಉದ್ಯಾವರ ತೋಟ ಸರಕಾರಿ ಮುಸ್ಲಿಂ ಎಲ್.ಪಿ ಶಾಲೆ ಹಾಗೂ ಅಂಗನವಾಡಿ ಅಪಾಯ ಭೀತಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ಇಲ್ಲಿನ ಮಕ್ಕಳನ್ನು ಸಮೀಪದ ಮಸೀದಿಯೊಂದರ ಅಧೀನದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಸುರಕ್ಷಿತವಲ್ಲದ ಕಟ್ಟಡದಲ್ಲಿ ಶಾಲೆ ಕಾರ್ಯಾಚರಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಶಿಕ್ಷಣ ಇಲಾಖೆಯಿಂದ ವರದಿ ಕೇಳಿದ್ದರು. ಇದರಂತೆ ಲಭಿಸಿದ ವರದಿಯ ಆಧಾರದಲ್ಲಿ ಶಾಲೆ ಹಾಗೂ ಅಂಗನವಾಡಿ ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಕ್ರಮಕೈಗೊಂಡಿದ್ದಾರೆ.
ಇದೇ ವೇಳೆ ಅಪಾಯ ಭೀತಿಯೊಡ್ಡುವ ಕಟ್ಟಡದಲ್ಲ್ಲಿ ಶಾಲೆ ಹಾಗೂ ಅಂಗನವಾಡಿ ಇದುವರೆಗೆ ಕಾರ್ಯಾಚರಿಸಿದ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದ್ದಾರೆ. ಹೊಸ ಶಾಲೆಕಟ್ಟಡ ನಿರ್ಮಿಸುವುದು ಹಾಗೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಂಜೇಶ್ವರ ಗ್ರಾಮ ಪಂಚಾಯತ್ ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಹಾಗೂ ಶಿಕ್ಷಣ ಇಲಾಖೆ ಎಂಬಿವುಗಳ ಸಂಯುಕ್ತ ಸಭೆ ಸೇರಿ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.
ಶಾಲೆಯ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಶಾಲೆಯನ್ನು ಸಂದರ್ಶಿಸಿದ ಜಿಲ್ಲಾಧಿಕಾರಿಯೊಂದಿಗೆ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್, ಮಂಜೇಶ್ವರ ಪಂ. ಅಧ್ಯಕ್ಷ ವಿ.ಪಿ.ಅಬ್ದ್ದುಲ್ ರಹ್ಮಾನ್, ಪಂ.ಸದಸ್ಯರು, ಪ್ರಭಾರ ಡಿಡಿಇ ಸವಿತ ಪಿ, ಮಂಜೇಶ್ವರ ಎಇಒ ನಾರಾಯಣ ಡಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಇಸ್ಮಾಯಿಲ್, ತಹಶೀಲ್ದಾರ್ ಪಿ. ಪ್ರೇಂರಾಜ್, ಮಂಜೇಶ್ವರ ಪಂ. ಕಾರ್ಯದರ್ಶಿ ಶಾನವಾಸ್, ಅಸಿ. ಇಂಜಿನಿಯರ್ ಅಕ್ಷರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.







