ಕಾಸರಗೋಡು: ಸ್ನಾನಕ್ಕೆಂದು ಸಮುದ್ರಕ್ಕಿಳಿದ ಬಳಿಕ ನಾಪತ್ತೆಯಾದ ಯುವಕರಿಬ್ಬರ ಪತ್ತೆಗಾಗಿ ಪೊಲೀ ಸರು ಮತ್ತು ಕರಾವಳಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.
ಚಂಗನಾಶ್ಶೇರಿ ಚಿರಂಚಿರ ವಾಳಪಳ್ಳಿಯ ಬಾಲು ಎಂಬವರ ಪುತ್ರ ಅಂಕಿತ್ (20) ಮತ್ತು ಚಿಂಙವನಂ ಪಾತ್ತಾಮುಟ್ಟತ್ ಎಬ್ರಹಾಂ ಎಂಬವರ ಪುತ್ರ ಅಪ್ಪು ಟಿ. ಎಬ್ರಹಾಂ (20) ಸಮುದ್ರದಲ್ಲಿ ನಾಪತ್ತೆಯಾದ ಯುವಕರಾಗಿದ್ದಾರೆ.
ಪಳ್ಳಿಕೆರೆಗೆ ಸಮೀಪದ ಚೇಟುಕುಂಡ್ ಮತ್ತು ಕಲ್ಲಿಂಗಾಲ್ ನಡುವಿನ ಪಳ್ಳಿಕ್ಕರೆಯ ರೆಡ್ಮೂನ್ ಬೀಚ್ಗೆ ಇವರಿಬ್ಬರು ಇತರ ಇಬ್ಬರು ಸ್ನೇಹಿತರಾದ ಅಲನ್ ಸೋನಿ ಮತ್ತು ಅಲನ್ ದೇವಸ್ಯ ಬೈಜು ಎಂಬವರೊಂದಿಗೆ ನಿನ್ನೆ ಸಂಜೆ ಬಂದಿದ್ದರು. ಆಗ ಅಂಕಿತ್ ಮತ್ತು ಅಪ್ಪು ಟಿ. ಎಬ್ರಾಹಂ ಸ್ನಾನಕ್ಕೆಂದು ಸಮುದ್ರಕ್ಕಿಳಿದರು. ತಡವಾದರೂ ಅವರು ದಡಕ್ಕೆ ಬಾರದೇ ಇರುವುದರಿಂದ ಗಾಬರಿಗೊಂಡ ಇತರ ಇಬ್ಬರು ಸ್ನೇಹಿತರು ಬೇಕಲ ಬೀಚ್ನಲ್ಲಿ ಕರ್ತವ್ಯದಲ್ಲಿದ್ದ ಲೈಫ್ ಗಾರ್ಡ್ರಲ್ಲಿ ವಿಷಯ ತಿಳಿಸಿದರು. ಲೈಫ್ಗಾರ್ಡ್ನವರು ತಕ್ಷಣ ಬೇಕಲ ಕರಾವಳಿ ಪೊಲೀಸರಿಗೆ ಮತ್ತು ಬೇಕಲ ಪೊಲೀಸರಿಗೆ ಮಾಹಿತಿ ನೀಡಿದರು. ತಡಮಾಡದೆ ಕರಾವಳಿ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಬೋಟ್ನಲ್ಲಿ ಸಮುಗ್ರ ದಾದ್ಯಂತ ವ್ಯಾಪಕ ಶೋಧ ನಡೆಸಿದರೂ, ನಾಪತ್ತೆಯಾದವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ. ಆ ನಾಪತ್ತೆಯಾದ ಇಬ್ಬರು ಯುವಕರು ಮತ್ತು ಅವರ ಜತೆಗಿದ್ದವರು ಬಾರ್ ಒಂದರಲ್ಲಿ ದುಡಿಯುತ್ತಿದ್ದರು. ಬಳಿಕ ಆ ಕೆಲಸವನ್ನು ಅವರು ತ್ಯಜಿಸಿದ್ದರೆನ್ನಲಾಗಿದೆ.







