ಕುಂಬಳೆ: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.87 ಕೋಟಿ ರೂ. ಮೌಲ್ಯದ 1281.7 ಗ್ರಾಂ ಚಿನ್ನ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ನಿವಾಸಿ ಅಬ್ದುಲ್ ರಶೀದ್ (24) ಎಂಬಾತನನ್ನು ಕಸ್ಟಮ್ಸ್ ತಂಡ ಬಂಧಿಸಿ ಸಮಗ್ರ ವಿಚಾರಣೆ ನಡೆಸಿದೆ.
ಈತ ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ನಿನ್ನೆ ಮುಂಜಾನೆ ಬಂದಿಳಿದಿದ್ದನು. ಆಗ ಆತನನ್ನು ತಪಾಸಣೆಗೊಳಪಡಿಸಿ ದಾಗ ಮಿಶ್ರಿತ ರೂಪದ ನಾಲ್ಕು ಚಿನ್ನದ ಮಾತ್ರೆಗಳನ್ನು ಆತನ ಗುದದ್ವಾರದಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಯಿತೆಂದು ಕಸ್ಟಮ್ಸ್ ತಂಡ ತಿಳಿಸಿದೆ.
ಕಲ್ಲಿಕೋಟೆ ಸೈಬರ್ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣವೊಂದರಲ್ಲೂ ಅಬ್ದುಲ್ ರಶೀದ್ ಆರೋಪಿಯಾಗಿದ್ದಾನೆ.
ಕಲ್ಲಿಕೋಟೆ ರಾಮನಾಟ್ಟುಕರೆ ನಿವಾಸಿಗಳಾದ ದಂಪತಿಯಿಂದ ಶೇರ್ ಟ್ರೇಡಿಂಗ್ ಕಂಪೆನಿಯ ಹೆಸರಲ್ಲಿ ಒಂದು ಕೋಟಿ ರೂ. ಎಗರಿಸಿದ ದೂರಿನಂತೆ ಆ ದಂಪತಿ ನೀಡಿದ ದೂರಿನಂತೆ ಕಲ್ಲಿಕೋಟೆ ಸೈಬರ್ ಪೊಲೀಸರು ಅಬ್ದುಲ್ ರಶೀದ್‌ನ ವಿರುದ್ಧ ಈ ಹಿಂದೆ ಪ್ರಕರಣ ದಾಖಲಿಸಿ ಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಪೊಲೀಸರು ಶೋಧ ಆರಂಭಿಸಿದಾಗ ಆತ ವಿದೇಶಕ್ಕೆ ಪರಾರಿಯಾಗಿದ್ದನು. ನಂತರ ಆತ ನಿನ್ನೆ ಮುಂಜಾನೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ, ಆ ಪ್ರಕರಣಕ್ಕೆ ಸಂಬಂಧಿಸಿ ವಿಮಾನ ನಿಲ್ದಾಣದ ಎಮಿಗ್ರೇಷನ್ ವಿಭಾಗ ವಶಕ್ಕೆ ತೆಗೆದುಕೊಂಡಿತ್ತು. ನಂತರ ಕಸ್ಟಮ್ಸ್ ತಂಡ ನಡೆಸಿದ ಶೋಧದಲ್ಲಿ ಆತನಿಂದ ಈ ಚಿನ್ನ ಪತ್ತೆಹಚ್ಚಿದೆ. ಬಂಧಿತನನ್ನು ಕಣ್ಣೂರಿನ ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧಿನದಲ್ಲಿರಿಸಲಾಯಿತು. ಕಣ್ಣೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಂದ ಅಕ್ರಮ ಚಿನ್ನ ಪತ್ತೆಹಚ್ಚುತ್ತಿರುವುದು ಕಳೆದ ಒಂದು ವರ್ಷದ ನಂತರ ಇದು ಮೊದಲ ಬಾರಿಯಾಗಿದೆ.







