ಬದಿಯಡ್ಕ: ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಧನ ಸಹಾಯವನ್ನು 6 ಲಕ್ಷ ರೂಪಾಯಿಗೆ ಏರಿಸಬೇಕೆಂದು ಒತ್ತಾಯಿಸಿ ಬದಿಯಡ್ಕ ಪಂಚಾಯತ್ ಸದಸ್ಯ ಗಂಗಾಧರ ಗೋಳಿಯಡ್ಕ ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಾರ್ಯಕ್ರಮ ನಿಮಿತ್ತ ಸಚಿವರು ನಿನ್ನೆ ಕಿಳಿಂಗಾರಿನ ಸಾಯಿ ಮಂದಿರಕ್ಕೆ ಆಗಮಿಸಿದ್ದ ವೇಳೆ ಮನವಿ ಸಲ್ಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಪರಿಶಿಷ್ಟ ಜಾತಿಯವರಿಗೆ ಮನೆ ನಿರ್ಮಾಣಕ್ಕೆ ಕೇವಲ 4 ಲಕ್ಷ ರೂಪಾಯಿ ಸರಕಾರ ನೀಡುತ್ತಿದೆ. ಆ ಮೊತ್ತದಿಂದ ಮನೆ ನಿರ್ಮಿಸಲು ಸಾಧ್ಯವಾಗದೆ ಹಲವು ಮನೆಗಳ ನಿರ್ಮಾಣ ಕೆಲಸ ಅರ್ಧದಲ್ಲೇ ಉಳಿದುಕೊಂಡಿದೆ. ಇದರಿಂದ ಬಡ ಕುಟುಂಬಗಳು ವಾಸ ಸೌಕರ್ಯವಿಲ್ಲದೆ ಸಂಕಷ್ಟವನ್ನು ಎದುರಿಸತ್ತಿವೆಯೆಂದು ಮನವಿಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ಪರಿಶಿಷ್ಟ ವರ್ಗದವರಿಗೆ ಸರಕಾರ ಮನೆ ನಿರ್ಮಾಣಕ್ಕೆ ಆರು ಲಕ್ಷ ರೂಪಾಯಿ ನೀಡುತ್ತಿದೆ. ಹಾಗಿರುವಾಗ ಪರಿಶಿಷ್ಟ ಜಾತಿಯವರಿಗೂ ಆ ಮೊತ್ತ ವನ್ನು ೬ ಲಕ್ಷ ರೂಪಾಯಿಗೆ ಹೆಚ್ಚಿಸ ಬೇಕೆಂದೂ ಗಂಗಾಧರ ಗೋಳಿಯಡ್ಕ ಮನವಿಯಲ್ಲಿ ವಿನಂತಿಸಿದ್ದಾರೆ.






