ಪೆರ್ಲ: ಸ್ವರ್ಗ- ಪೆರ್ಲ (ಸೂರಂಬೈಲ್) ರಸ್ತೆ ಅಭಿವೃದ್ಧಿ ಆಗ್ರಹಿಸಿ ಎಣ್ಮಕಜೆ ಮಂಡಲ ೮ನೇ ವಾರ್ಡ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಶಾಸಕ ಎಕೆಎಂ ಅಶ್ರಫ್‌ರಿಗೆ ಮನವಿ ನೀಡಲಾಯಿತು. ಪೆರ್ಲ ಪೇಟೆಯಿಂದ ಪಾಣಾಜೆ ಮೂಲಕ ಪುತ್ತೂರು ಸಂಪರ್ಕಿಸುವ ಪೆರ್ಲ-ಸ್ವರ್ಗ ರಸ್ತೆಯನ್ನು ಅಗಲಗೊಳಿಸಿ ನವೀಕರಿಸುವಂತೆ ಸಮಿತಿ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.
ಕರ್ನಾಟಕದ ಪುತ್ತೂರು ಮಾತ್ರವಲ್ಲದೆ ಬೆಳ್ಳೂರು ಪಂಚಾಯತ್ ವ್ಯಾಪ್ತಿ ಮೂಲಕ ಸುಳ್ಯಪದವು, ಈಶ್ವರಮಂಗಲ, ಮುಳ್ಳೇರಿಯ, ಕುಂಬ್ಡಾಜೆ ಪಂಚಾಯತ್‌ನ ಏತಡ್ಕ ಸಹಿತ ವಿವಿಧ ಭಾಗಗಳಿಗೆ ಸಂಪರ್ಕಿಸುವ ಪ್ರಧಾನ ರಸ್ತೆ ಇದಾಗಿದೆ. ಕಾಸರಗೋಡು, ಕುಂಬಳೆ, ಕರ್ನಾಟಕ ಭಾಗದಿಂದ ಖಾಸಗಿ ಬಸ್‌ಗಳು ಕೂಡಾ ಈ ರಸ್ತೆಯಲ್ಲಿ ಸಂಚರಿಸುತ್ತಿವೆ.
ಸ್ವರ್ಗದಲ್ಲಿ ಪಡ್ರೆ ಗ್ರಾಮಕಚೇರಿ, ವಿವೇಕಾನಂದ ಎಯುಪಿ ಶಾಲೆ, ಕೇರಳ ಗ್ರಾಮೀಣ ಬ್ಯಾಂಕ್, ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಅಕ್ಷಯಕೇಂದ್ರ, ವಾಣಿನಗರದಲ್ಲಿ ಪಡ್ರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಸ್‌ಸಿಎಸ್‌ಟಿ ಹಾಸ್ಟೆಲ್, ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಗೆ ತೆರಳುವ ಜನರು ಸಂಚರಿಸುವ ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತಿವೆ.
ಈ ರಸ್ತೆಯಲ್ಲಿ ವಾಹನ ಚಲಾವಣೆ ಈಗ ಸಂಕಷ್ಟ ಸ್ಥಿತಿಯಲ್ಲಿದ್ದು, ಹಲವು ವರ್ಷಗಳಿಂದ ಈ ರಸ್ತೆಯನ್ನು ನವೀಕರಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ರಸ್ತೆ ಅಗಲಗೊಳಿಸಿ ದುರಸ್ತಿಪಡಿಸಬೇಕೆಂದು ಎಣ್ಮಕಜೆ ಮಂಡಲ ಕಾಂಗ್ರೆಸ್ ೮ನೇ ವಾರ್ಡ್ ಸಮಿತಿ ಅಧ್ಯಕ್ಷ ಅಚ್ಯುತ ಸ್ವರ್ಗ, ಕಾರ್ಯದರ್ಶಿ ಲಕ್ಷ್ಮಣ ಪಡ್ಪು, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪಡ್ಪು, ಶಶಿರಾಜ್ ಕೊಡೆಂಕೀರಿ, ಉದಯರಾಜ್, ಜಗದೀಶ್ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.






