ಎಲ್ಲೆಲ್ಲೂ ಅಭಿವೃದ್ಧಿಯೇ ಮೂಲಮಂತ್ರ: ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ರಸ್ತೆ ಇಲ್ಲದ ಬಡ ಕುಟುಂಬ ಅಧಿಕಾರಿಗಳ ಕಣ್ಣಿಂದ ಮರೆ

ಮುಳ್ಳೇರಿಯ: ಅಭಿವೃದ್ಧಿಯೇ ಮೂಲಮಂತ್ರವಾಗಿ ವಿವಿಧ ರಾಜಕೀಯ ಪಕ್ಷಗಳು ಘೋಷಿಸಿಕೊಳ್ಳುತ್ತಿರುವಾಗ ಅಭಿವೃದ್ಧಿ ಬಿಟ್ಟು ಮೂಲಭೂತ ಸೌಕರ್ಯವೇ ಇಲ್ಲದೆ ಕೆಲವರು ಸಂಕಷ್ಟಪಡುವಾಗ ಅಧಿಕಾರಿವರ್ಗ ಮೌನವಾಗಿರುವುದು ಜನಸಾಮಾನ್ಯರಲ್ಲಿ ರೋಷಕ್ಕೆ ಕಾರಣವಾಗುತ್ತಿದೆ.

ಕಾರಡ್ಕ ಪಂಚಾಯತ್‌ನ 7ನೇ ವಾರ್ಡ್ ವ್ಯಾಪ್ತಿಯ ಮಾಯಿಲಂಕೋಟೆ ಬಳಿಯ ಕೆಲವು ಕುಟುಂಬಗಳು ಈಗಲೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಕುಂಟಾರು ಶಾಲೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದ ಮಾಯಿಲಂಕೋಟೆಗೆ ಈಗಲೂ ರಸ್ತೆ ಸೌಕರ್ಯವಿಲ್ಲದ ಕಾರಣ ಇಲ್ಲಿಂದ ಅಸೌಖ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಜನರು ಹೊತ್ತೊಯ್ಯಬೇಕಾಗುತ್ತಿದೆ. ಇಲ್ಲಿನ ಸುಮಾರು 60 ವರ್ಷ ಪ್ರಾಯದ ಈಶ್ವರ ನಾಯ್ಕ ಎಂಬವರು ಕಳೆದ 4 ವರ್ಷಗಳಿಂದ ನಡೆದಾಡಲು ಆಗದೆ   ಮಲಗಿದ್ದಲ್ಲೇ ಇದ್ದಾರೆ. ಇವರಿಗೆ  ರೋಗ ಉಲ್ಭಣವಾಗು ವಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸ್ಥಳೀಯರಾದ ಯುವಕರ ಸಹಾಯ ಅನಿವಾರ್ಯವಾಗುತ್ತಿದೆ. ಹೆಚ್ಚಿನ ದಿನಗಳಲ್ಲಿ ಕೆಲವೊಮ್ಮೆ ರಾತ್ರಿ ವೇಳೆ ಅಸೌಖ್ಯ  ಉಲ್ಭಣವಾಗುವಾಗ ಆಸ್ಪತ್ರೆಗೆ ಕೊಂಡೊಯ್ಯಲು ಸುಮಾರು 1 ಕಿಲೋ ಮೀಟರ್ ದೂರದವರೆಗೆ ಸ್ಟ್ರೆಚರ್‌ನಲ್ಲಿ ಮಲಗಿಸಿ ಸಾಗಿಸಬೇಕಾಗುತ್ತಿದೆ. ಪ್ಲಾಂಟೇಶನ್‌ನ ಸ್ಥಳವಾದ ಕಾರಣ ರಸ್ತೆ ನಿರ್ಮಾಣಕ್ಕೆ ತಡೆಯಾಗುತ್ತಿದೆಯೆಂದು ಹೇಳಲಾಗುತ್ತಿದೆ. ಇಲ್ಲಿ ಎಸ್‌ಸಿ-ಎಸ್‌ಟಿ ಕುಟುಂಬಗಳು ಹೆಚ್ಚಾಗಿ ವಾಸಿಸುತ್ತಿದ್ದಾರೆ.   ರಸ್ತೆ ನಿರ್ಮಾಣಕ್ಕೆ ಎದುರಾಗಿರುವ  ತೊಡಕನ್ನು ಪರಿಹರಿಸಬೇಕೆಂದು ಆಗ್ರಹಿಸಿ  ಪಂಚಾಯತ್  ಪ್ರತಿನಿಧಿ ಬೇಬಿ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆಂದು ತಿಳಿಸಿದ್ದು, ಆದರೆ ಆ ಮನವಿಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲವೆಂದಿದ್ದಾರೆ.

ಮಾಯಿಲಂಕೋಟೆಯಲ್ಲಿ ಸುಮಾರು 25ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು,  ಇದರಲ್ಲಿ ಒಂದು ಭಾಗದವರಿಗೆ ರಸ್ತೆ ಸೌಕರ್ಯವಿದ್ದು, ಕೆಲವು ಮನೆಗಳಿಗೆ ಒಂದು ಕಿಲೋ ಮೀಟರ್ ಕಾಡಿನ ಮೂಲಕ ನಡೆದು ರಸ್ತೆಗೆ ಸೇರಬೇಕಾಗುತ್ತಿದೆ. ಪ್ರತಿಬಾರಿ ಈಶ್ವರ ನಾಯ್ಕರಿಗೆ ಅಸೌಖ್ಯ ಉಲ್ಭಣವಾಗುವಾಗ ಸ್ಥಳೀಯರಾದ ಕೃಷ್ಣ ಭರ, ಬಾಬಣ್ಣ, ರಾಮ ಭೈರ, ಶೇಖರ, ಸತೀಶ್, ಸುರೇಶ್ ಮೊದಲಾದವರು ಸೇರಿ  ಸ್ಟ್ರೆಚರ್‌ನಲ್ಲಿ ಮಲಗಿಸಿ ಕೊಂಡೊಯ್ಯುತ್ತಾರೆ. ಆದರೆ ಪ್ರತಿಬಾರಿಯೂ ಇದೇ ರೀತಿ ಮಾಡಬೇಕಾಗಿರುವುದರಿಂದ ಮನೆ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಈಶ್ವರ ನಾಯ್ಕರ ಮನೆಯಲ್ಲಿ ಅಸೌಖ್ಯ ಬಾಧಿತ ಪತ್ನಿ ಹಾಗೂ ಓರ್ವ ಪುತ್ರನಿದ್ದಾರೆ. ವಿವಾಹವಾಗಿ ತೆರಳಿರುವ ಪುತ್ರಿ ಕೂಡಾ ಈಗ ತಂದೆಯ ಪರಿಚರಣೆಗಾಗಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಈ ಬಡ ಕುಟುಂಬದ ವೃದ್ಧರ ಜೀವ ಉಳಿಸಲು ಜನರೆಲ್ಲಾ ಪ್ರಯತ್ನಿಸುತ್ತಿದ್ದರೂ ರಸ್ತೆ ಸೌಕರ್ಯದ ಕೊರತೆಯಿಂದ ಕಂಗಾಲಾಗಿದ್ದಾರೆ. ಏನಿಲ್ಲದಿದ್ದರೂ ಅಸೌಖ್ಯ ಉಲ್ಭಣವಾಗುವಾಗ ಆಸ್ಪತ್ರೆಗೆ ತಲುಪಿಸಲಾದರೂ ಒಂದು ರಸ್ತೆ ಸೌಕರ್ಯವಿದ್ದರೆ ಎಂಬ ಆಗ್ರಹವನ್ನು ಕುಟುಂಬ ವ್ಯಕ್ತಪಡಿಸುತ್ತಿದೆ. ಆದರೆ ಅಭಿವೃದ್ಧಿಯನ್ನು ಊರಿಡೀ ಹರಡುತ್ತಿದ್ದೇವೆ ಎಂದು ಬೊಬ್ಬೆ ಹೊಡೆಯುವ ಜನ ಪ್ರತಿನಿಧಿಗಳು  ಮಾಯಿಲಂಕೋಟೆಗೆ ರಸ್ತೆ ಸೌಕರ್ಯ ಏರ್ಪಡಿಸುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ದೌರ್ಭಾಗ್ಯಕರ ಎಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ. ಇನ್ನಾದರೂ ಜನಪ್ರನಿತಿಧಿಗಳು, ಅಧಿಕಾರಿಗಳು ಎಚ್ಚೆತ್ತು ಮಾಯಿಲಂಕೋಟೆ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಏರ್ಪಡಿಸಬೇಕಾಗಿರುವುದು ಅತ್ಯಗತ್ಯವಾಗಿದೆ.

RELATED NEWS

You cannot copy contents of this page