ಹೊಸಂಗಡಿ ರೈಲ್ವೇ ಮೇಲ್ಸೇತುವೆ: ನಿರೀಕ್ಷೆಯಲ್ಲಿ ಸ್ಥಳೀಯರು: ದಶಕಗಳ ಕನಸು ನನಸಾದಿತೇ..!

ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಧಾನ ಪೇಟೆಯಾದ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆಗಾಗಿ ಸ್ಥಳೀಯರು ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. ಕೇಂದ್ರದ ಯುಪಿಎ ಆಡಳಿತ ಕಾಲದಲ್ಲಿ ಇ. ಅಹಮ್ಮದ್ ಕೇಂದ್ರ ರೈಲ್ವೇ ಸಹ ಸಚಿವರಾಗಿದ್ದಾಗ ಹೊಸಂಗಡಿಯಲ್ಲಿ ರೈಲ್ವೇ ಮೇಲ್ಸೇತುವೆ ಮಂಜೂರು ಮಾಡಬೇಕೆಂದು ಆಗ್ರಹ ಕೇಳಿ ಬಂದಿತ್ತು. ಅಗತ್ಯದ ಮೊತ್ತ ಮಂಜೂರು ಮಾಡಿರುವುದಾಗಿಯೂ ಪ್ರಚಾರವಿತ್ತು. ಆದರೆ ಆ ಬಳಿಕ ಎರಡು ದಶಕಗಳು ಕಳೆದರೂ ಯಾವುದೇ ಕ್ರಮ ಉಂಟಾಗಿಲ್ಲ.

ಮಂಜೇಶ್ವರ ತಾಲೂಕಿನಲ್ಲಿ ಮಾತ್ರವಾಗಿ ನಾಲ್ಕು ರೈಲ್ವೇ ಕ್ರಾಸಿಂಗ್ ವ್ಯವಸ್ಥೆಯಿದೆ. ಹೊಸಂಗಡಿಗೆ ಹೊರತಾಗಿ ಮಂಜೇಶ್ವರ, ಮುಟ್ಟಂ, ಉಪ್ಪಳ ಎಂಬೆಡೆಗಳಲ್ಲಿ ರೈಲ್ವೇ ಗೇಟ್ ಇದೆ. ಇದರಲ್ಲಿ ಹೊಸಂಗಡಿಯಲ್ಲಿ ಮೇಲ್ಸೇತುವೆ ನಿರ್ಮಾಣ ರೈಲ್ವೇಯ ಸಕ್ರಿಯ ಪರಿಗಣನೆಯಲ್ಲಿದೆ. ಮೇಲ್ಸೇತುವೆಗೆ ಈ ಮೊದಲು 40.4 ಕೋಟಿ ರೂ. ಮಂಜೂರು ಮಾಡಲಾಗಿತ್ತೆನ್ನಲಾಗಿದೆ. ಇದಕ್ಕೆ ಅಗತ್ಯವಾದ ಸ್ಥಳ ವಹಿಸಿಕೊಳ್ಳುವುದಕ್ಕಿ ರುವ ವಿಜ್ಞಾಪನೆ ಹೊರಡಿಸಲಾಗಿತ್ತು. ಕೇರಳ ರೋಡ್ ಆಂಡ್ ಬ್ರಿಡ್ಜಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ಗೆ ನಿರ್ಮಾಣ ಹೊಣೆ ನೀಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಹೊಸ ಷಟ್ಪಥ ಹೆದ್ದಾರಿ ಆದ ಬಳಿಕ ನಿರ್ದಿಷ್ಟ ರೈಲ್ವೇ ಮೇಲ್ಸೇತುವೆಯ ಅಲೈನ್‌ಮೆಂಟ್‌ನಲ್ಲಿ ಅಗತ್ಯದ ಕೆಲವು ಬದಲಾವಣೆಗಳನ್ನು ತರಲಿರುವ ಸರ್ವೆ ಕ್ರಮಗಳನ್ನು ಅಧಿಕಾರಿಗಳು ನಡೆಸುತ್ತಿದ್ದಾರೆನ್ನಲಾಗಿದೆ.

ರಾಜ್ಯದಲ್ಲಿ ರೈಲ್ವೇ ಗೇಟ್‌ಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಅನುಮತಿ ನೀಡಿದ ಮೇಲ್ಸೇತುವೆಗಳ ಕೆಲಸ ತುರ್ತಾಗಿ ಮಾಡಿ ಮುಗಿಸಲಿರುವ ಯತ್ನದಲ್ಲಿ ರೈಲ್ವೇ ಅಧಿಕಾರಿಗಳಿದ್ದಾರೆನ್ನಲಾಗಿದೆ. ಕಳೆದ ಆರು ತಿಂಗಳೊಳಗೆ ೨೪ ರೈಲ್ವೇ ಗೇಟ್‌ಗಳಲ್ಲಿ ವಾಹನ ಅಪಘಾತಗಳು ಸಂಭವಿಸಿವೆ. ಪಾಲಕ್ಕಾಡ್ ಡಿವಿಶನ್‌ನಲ್ಲಿ ಮಾತ್ರವಾಗಿ ಕಳೆದ ವರ್ಷ ೫೫ ಅಪಘಾತಗಳು ನೋಂದಾಯಿಸಲ್ಪಟ್ಟಿವೆ. 129 ಗೇಟ್‌ಗಳು ಪಾಲಕ್ಕಾಡ್ ಡಿವಿಶನ್‌ನಲ್ಲಿ ಮಾತವಾಗಿದೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಚಾಲಕರ ಪರವಾನಗಿ ರದ್ದುಗೊಳಿಸಿ ಇವರಿಂದ ರೈಲ್ವೇ 17.28 ಲಕ್ಷ ರೂ. ನಷ್ಟ ಪರಿಹಾರವಾಗಿ ವಸೂಲು ಮಾಡಿತ್ತು. ಈ ಮಧ್ಯೆ ಜಿಲ್ಲೆಯ ವಿವಿಧ ಭಾಗಗಳಲ್ಲಿ  ರೈಲ್ವೇ ಫೂಟ್‌ಓವರ್ ಬ್ರಿಡ್ಜ್‌ಗಳು ಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಪ್ರಾಯದ ವರಿಗೆ, ವಿದ್ಯಾರ್ಥಿಗಳಿಗೆ ರೈಲ್ವೇಯ ದ್ವಿ ಹಳಿ ಸಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ರೀತಿಯ ನಿರ್ದೇಶವನ್ನು ಮುಂದಿಡಲಾಗಿದೆ. ಇದರಲ್ಲಿ ಮೊಗ್ರಾಲ್ ಕೊಪ್ಪಳಂ ಫೂಟ್ ಓವರ್‌ಬ್ರಿಡ್ಜ್ ರೈಲ್ವೇಯ ಪರಿಗಣನೆಯಲ್ಲಿದೆ. ಈ ಪ್ರದೇಶವನ್ನು ರೈಲ್ವೇ ಅಧಿಕಾರಿಗಳು ಪರಿಶೀಲಿ ಸಿದ್ದಾರೆ. ಅನುಮತಿಗೆ ಯಾವುದೇ ತಡೆ ಇಲ್ಲವೆಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಇದರಲ್ಲೂ ಯಾವುದೇ ಮುಂದಿನ ನಡೆ ಉಂಟಾಗಿಲ್ಲ.

ಮೆಟ್ರೋ ಮ್ಯಾನ್ ಇ. ಶ್ರೀಧರನ್ ಮುಂದಿಟ್ಟ ಅತಿ ವೇಗ ಹಳಿ, ಕೇಂದ್ರ ರೈಲ್ವೇ ಇಲಾಖೆಯ ಪರಿಗಣನೆಯಲ್ಲಿರುವ ನಾಲ್ಕು ಹಳಿ ಎಲ್ಲಾ ಚರ್ಚೆಯಾಗುತ್ತಿರುವ ಮಧ್ಯೆ ರೈಲ್ವೇ ಗೇಟ್‌ಗಳು, ಮೇಲ್ಸೇತುವೆಗಳ ಬೇಡಿಕೆಯೂ ಹೆಚ್ಚುತ್ತಿದೆ.

You cannot copy contents of this page