ಹೊಸಂಗಡಿ: ಹೊಸಂಗಡಿ ಪೇಟೆಯಲ್ಲಿ ಹಾಡಹಗಲೇ ಯುವತಿಯ ಕುತ್ತಿಗೆಯಿಂದ ಎರಡೂಕಾಲು ಪವನ್ ಚಿನ್ನದ ಸರ ಕಸಿದು ಪರಾರಿಯಾದ ಆರೋಪಿಗಳ ಪೈಕಿ ಓರ್ವ ಸೆರೆಗೀಡಾಗಿದ್ದಾನೆ.
ಬಂಬ್ರಾಣ ಕಳತ್ತೂರು ಚೆಕ್ಪೋಸ್ಟ್ ಬಳಿಯ ನಿವಾಸಿ ಸಂದೀಪ್ ಎ ಯಾನೆ ಸಂತು (31) ಎಂಬಾತನನ್ನು ಮಂಜೇಶ್ವರ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಸರ ಎಗರಿಸಲು ಈತನೊಂದಿಗಿದ್ದ ಇನ್ನೋರ್ವನ ಪತ್ತೆಗಾಗಿ ಶೋಧ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವತಿಯ ಕುತ್ತಿಗೆಯಿಂದ ಕಸಿದ ಚಿನ್ನದ ಸರವನ್ನು ಆರೋಪಿಗಳು ಕಾಸರಗೋಡಿನ ಜ್ಯುವೆಲ್ಲರಿ ಯೊಂದರಲ್ಲಿ ಅಡವಿರಿಸಿದ್ದು, ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ. ಆರೋಪಿಗಳು ಸಂಚರಿಸಿದ ಸ್ಕೂಟರನ್ನು ಪತ್ತೆಹಚ್ಚಲಾಗಲಿಲ್ಲ.
ಕಳೆದ ಸೋಮವಾರ ಅಪರಾಹ್ನ 3.10ರ ವೇಳೆ ಹೊಸಂಗಡಿ ರಾಷ್ಟ್ರೀ ಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪೈವಳಿಕೆ ಬಾಯಿಕಟ್ಟೆಯ ನಯನ (30) ಎಂಬವರ ಕುತ್ತಿಗೆಯಿಂದ ಆರೋಪಿ ಗಳು ಚಿನ್ನದ ಸರ ಎಗರಿಸಿದ್ದಾರೆ.
ನಯನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ರೈನ್ ಕೋಟ್ ಧರಿಸಿ ಸ್ಕೂಟರ್ನಲ್ಲಿ ಆರೋಪಿಗಳು ತಲುಪಿದ್ದರು. ನಯನರ ಸಮೀಪ ಸ್ಕೂಟರ್ ನಿಲ್ಲಿಸಿ ಕಡಂಬಾರ್ಗಿರುವ ದಾರಿ ಯಾವುದೆಂದು ಕೇಳಿದ್ದು, ನಯನ ದಾರಿ ಸೂಚಿಸುತ್ತಿದ್ದಂತೆ ಆರೋಪಿಗಳು ಆಕೆಯ ಕುತ್ತಿಗೆಯಿಂದ ಸರ ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಲಭಿಸಿದ ದೂರಿನಂತೆ ಕೇಸು ದಾಖಲಿಸಿದ ಮಂಜೇಶ್ವರ ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದರು. ಘಟನೆ ಸ್ಥಳದ ಸಿಸಿ ಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳು ಸಂಚರಿಸಿದ ಸ್ಕೂಟರ್ನ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ತನಿಖೆ ತೀವ್ರಗೊಳಿಸಿದ ಪೊಲೀಸರು ಆರೋಪಿಗಳಲ್ಲೋರ್ವನಾದ ಸಂದೀಪ್ನನ್ನು ಬಂಧಿಸಲಾಗಿದೆ. ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ಇದೇ ವೇಳೆ 5 ವರ್ಷಗಳ ಹಿಂದೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣವೊಂದರಲ್ಲಿ ಸಂದೀಪ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.





