ಕಾಸರಗೋಡು: ಪ್ರಜಾಪ್ರಭುತ್ವವನ್ನು ಕೊಚ್ಚಿ ಹಾಕಿದ ಕಾಂಗ್ರೆಸ್ ಪಕ್ಷದ ಹೊಸ ತಲೆಮಾರು ಮುಖಂಡರು ಪ್ರಜಾಪ್ರಭುತ್ವ ಹಕ್ಕುಗಳ ಬಗ್ಗೆ ವಾಗ್ಮಿಗಳಾಗುತ್ತಿದ್ದಾರೆ. ತನ್ನ ಹಿಂದಿನ ತಲೆಮಾರುಗಳು ನಡೆಸಿದ ಮಾನವಹಕ್ಕು ಧ್ವಂಸವನ್ನು ತಿರಸ್ಕರಿಸಲು ತಯಾರಾಗದೆ ಜೇಬಲ್ಲಿ ಸಂವಿಧಾನವನ್ನು ಇರಿಸಿಕೊಂಡು ನಡೆಯುವ ರಾಹುಲ್ ಗಾಂಧಿ ಸ್ವಯಂ ಅಪಹಾಸ್ಯರಾಗುತ್ತಿರುವು ದಾಗಿ ಬಿಜೆಪಿ ರಾಜ್ಯ ವಕ್ತಾರ ಟಿ.ಪಿ. ಜಯಚಂದ್ರನ್ ಮಾಸ್ತರ್ ನುಡಿದರು.
ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ 51ನೇ ವಾರ್ಷಿಕಾಚರಣೆ ಯಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ ಆಯೋಜಿಸಿದ ತುರ್ತು ಪರಿಸ್ಥಿತಿ ವಿರುದ್ಧ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದಿರಾ ಗಾಂಧಿ ಜ್ಯಾರಿಗೊಳಿಸಿದ 42ನೇ ಸಂವಿಧಾನ ತಿದ್ದುಪಡಿ ಪೌರನಿಗಿರುವ ಹಕ್ಕುಗಳನ್ನು ಆಡಳಿತ ಕೂಟದ ಔದಾರ್ಯವಾಗಿ ಬದಲಿಸಿದೆ. ಖಡ್ಡಾಯ ಸಂತಾನಹರಣ, ಅತಿಕ್ರೂರ ಹಲ್ಲೆ ನಡೆಸಲಾದರೂ ದೇಶದ ಜನರು ಸಂಯಮ ಕಳೆದುಕೊಂಡಿರಲಿಲ್ಲ. ಸರಕಾರದ ಕಾಡು ನೀತಿಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿರುವುದು ಬಿಜೆಪಿ ಮಾತ್ರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ೬೦ರಷ್ಟು ತುರ್ತು ಪರಿಸ್ಥಿತಿ ಹೋರಾಟಗಾರರನ್ನು ಸಮ್ಮೇಳನದಲ್ಲಿ ಗೌರವಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸವಿತ ಟೀಚರ್, ರಾಮಪ್ಪ ಮಂಜೇಶ್ವರ, ಎ. ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್, ಜಿಲ್ಲಾ ಉಪಾಧ್ಯಕ್ಷ ಎಂ. ಭಾಸ್ಕರನ್, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶೈಜು ಮಾತನಾಡಿದರು.






