ಬದಿಯಡ್ಕ: ಹೆಂಚಿನ ಮನೆಯೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಕುಟುಂಬ ಅಪಾಯದಿಂದ ಪಾರಾಗಿದೆ.
ಪಳ್ಳತ್ತಡ್ಕ ನಿವಾಸಿ ಆಟೋರಿಕ್ಷಾ ಚಾಲಕನಾಗಿರುವ ಐತ್ತಪ್ಪ ನಾಯ್ಕ ಎಂಬವರ ಮನೆ ನಿನ್ನೆ ರಾತ್ರಿ 8 ಗಂಟೆಗೆ ಕುಸಿದು ಬಿದ್ದಿದೆ. ಮಳೆ ಸುರಿಯುತ್ತಿದ್ದಂತೆ ಮನೆ ಕುಸಿದಿದ್ದು, ಶಬ್ದ ಕೇಳಿ ಐತ್ತಪ್ಪ ನಾಯ್ಕ ಹಾಗೂ ಪತ್ನಿ ಹೊರಗೆ ಓಡಿದ್ದಾರೆ. ಇದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಮನೆ ಇದಾಗಿದೆ. ಇದರಿಂದ ಇವರಿಗೆ ಹೊಸ ಮನೆ ಪಂಚಾಯತ್ನಿಂದ ಮಂಜೂರಾಗಿದ್ದು, ಅದರ ಹಣ ಪೂರ್ತಿ ಲಭಿಸದುದರಿಂದ ಮನೆ ಕೆಲಸ ಪೂರ್ತಿಗೊಳಿಸಲಾಗಿಲ್ಲ. ಇದರಿಂದ ಹಳೆಯ ಮನೆಯಲ್ಲೇ ವಾಸಿಸಬೇಕಾಗಿ ಬಂದಿತ್ತು. ಇದೀಗ ಈ ಮನೆ ಕುಸಿದುದರಿಂದ ವಾಸ ಸಮಸ್ಯೆ ಎದುರಾಗಿದೆ ಎಂದು ಕುಟುಂಬ ತಿಳಿಸುತ್ತಿದೆ.






