ಚೆರ್ಕಳ ಪೇಟೆಯಲ್ಲಿ ಹೆದ್ದಾರಿ ನಿರ್ಮಾಣ ವಿಳಂಬಗತಿಯಲ್ಲಿ: ಮರ್ಚೆಂಟ್ಸ್ ಅಸೋಸಿಯೇಶನ್‌ನಿಂದ ಪ್ರತಿಭಟನಾ ಉಪವಾಸ ಮುಷ್ಕರ

ಚೆರ್ಕಳ: ಚೆರ್ಕಳ ಪೇಟೆಯಲ್ಲಿ ಹೆದ್ದಾರಿ ನಿರ್ಮಾಣ, ನಿರ್ಮಾಣದಲ್ಲಿ ತಾರತಮ್ಯ ನೀತಿ ಮುಂದುವರಿಸಿದರೆ ಅನಿರ್ದಿಷ್ಟಾವಧಿ ಕಾಲ ಮುಷ್ಕರ ಆರಂಭಿಸುವುದಾಗಿ ಶಾಸಕ ಕಲ್ಲಟ್ರ ಮಾಹಿನ್ ಎಚ್ಚರಿಸಿದ್ದಾರೆ. ನಾಲ್ಕು ವರ್ಷ ಪೂರ್ತಿಗೊಂಡರೂ ಅರ್ಧ ಕೆಲಸ ಕೂಡ ಮುಗಿಸಲು ಸಾಧ್ಯವಾಗದೆ ಜಿಲ್ಲಾಡಳಿತ ಸಮಯಾಸಮಯಗಳಲ್ಲಿ ನೀಡುತ್ತಿರುವ ನಿರ್ದೇಶಗಳನ್ನೆಲ್ಲ ಗಾಳಿಗೆ ತೂರಿ ಎನ್‌ಎಚ್ 66 ಚೆಂಗಳ-ನೀಲೇಶ್ವರ ರೀಚ್‌ನ ನಿರ್ಮಾಣ ಹೊಣೆಯಿರುವ ಮೆಗಾ ಕನ್‌ಸ್ಟ್ರಕ್ಷನ್ ಕಂಪೆನಿಯ ನೀತಿರಹಿತವಾದ ಕ್ರಮವನ್ನು ಪ್ರಶ್ನಿಸಿ ಚೆರ್ಕಳ ಮರ್ಚೆಂಟ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಚೆರ್ಕಳದಲ್ಲಿ ಜನಪರ ಒಕ್ಕೂಟ ನಡೆಸಿದ ಏಕ ದಿನ ಉಪವಾಸ ಮುಷ್ಕರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾನೂನು ಉಲ್ಲಂಘನೆ, ಅವೈಜ್ಞಾನಿಕವಾಗಿ ಕಾರ್ಮಿಕರು, ಯಂತ್ರೋಪಕರಣಗಳು ಇಲ್ಲದೆ ಕಳೆದ ನಾಲ್ಕು ವರ್ಷದಿಂದ ಚೆರ್ಕಳ ಪೇಟೆಯನ್ನು ಕೆಸರುಗದ್ದೆಯಾಗಿ ಮಾರ್ಪಡಿಸಿದ್ದು, ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಿಂದ ಸ್ಥಳೀಯರ ಸಂಯಮವನ್ನು ನಿರ್ಮಾಣ ಕಂಪೆನಿ ಪರೀಕ್ಷಿಸುತ್ತಿದೆಯೆಂದು ಅವರು ಆರೋಪಿಸಿದರು. ಇದೇ ಸ್ಥಿತಿ ಮುಂದುವರಿದರೆ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. ಬ್ಲೋಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಕುಂಞಿ ಚೆರ್ಕಳ ಅಧ್ಯಕ್ಷತೆ ವಹಿಸಿದರು. ಚೆರ್ಕಳ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಂ. ಶರೀಫ್ ಸ್ವಾಗತಿಸಿದರು. ಶಾಸಕ ನೀಲಕಂಠನ್, ಉಸ್ತಾದ್ ಶಮೀಶ್ ಖಾನ್, ಫಾದರ್ ಮ್ಯಾಥ್ಯುಬೇಬಿ, ಪಂಚಾಯತ್ ಅಧ್ಯಕ್ಷ ವಸಂತ ಅಜಕ್ಕೋಡ್, ಮಾಹಿನ್ ಕೇಳೋಟ್, ಹನೀಫ್ ಪಾಣಲಂ, ಜಲೀಲ್ ಎರ್ದುಂಕಡವು ಸಹಿತ ಹಲವರು ಮಾತನಾಡಿದರು. ಶರೀಫ್ ಬಿ.ಎಂ., ನವಾಸ್ ಬೇರ್ಕ, ಮುಹಮ್ಮದ್ ಮುಳಿಯಾರ್, ಹುಸೈನ್ ಎಡನೀರು ಎಂಬಿವರು ಉಪವಾಸ ನಡೆಸಿದರು. ಸಮಾರೋಪ ಸಮಾರಂಭವನ್ನು ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ನವಾಸ್ ಬೇರ್ಕ ಅಧ್ಯಕ್ಷತೆ ವಹಿಸಿದರು. ಮುತ್ತಲಿಬ್ ಬೇರ್ಕ ಸ್ವಾಗತಿಸಿ, ಮೆಹಮೂದ್ ಮುಳಿಯಾರ್ ವಂದಿಸಿದರು

RELATED NEWS

You cannot copy contents of this page