ಕತ್ತಿ ತೋರಿಸಿ ಬೆದರಿಸಿ ಮಹಿಳೆಯ ಚಿನ್ನಾಭರಣ ಅಪಹರಣ: ಆರೋಪಿಗಳಿಗಾಗಿ ಶೋಧ

ಮಂಜೇಶ್ವರ: ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಸರ ಅಪಹರಣ ಘಟನೆಗಳು  ಹೆಚ್ಚುತ್ತಿದ್ದು, ಸ್ಥಳೀಯರು ಬೀತಿಯಲ್ಲಿದ್ದಾರೆ. ಈ ತಿಂಗಳ 22ರಂದು ಹೊಸಂಗಡಿಯ ಎಸ್‌ಬಿಐ ಬ್ಯಾಂಕ್ ಸಮೀಪ ಸರ್ವೀಸ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಬಳಿ ಬಂದ ಸ್ಕೂಟರ್ ಸವಾರರು ಆಕೆಯ ಕುತ್ತಿಗೆಯಲ್ಲಿದ್ದ ಎರಡೂಕಾಲು ಪವನ್ ಚಿನ್ನದ ಸರವನ್ನು  ಲೂಟಿಗೈದ ಘಟನೆ ನಡೆದಿದ್ದು, ಇದರಲ್ಲಿ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇದೇ ರೀತಿಯ ಘಟನೆ ನಿನ್ನೆ ಬೆಳಿಗ್ಗೆ ಉಪ್ಪಳ ರೈಲ್ವೇ ನಿಲ್ದಾಣ ಪರಿಸರದ ಬಳಿ ನಡೆದಿದೆ. ಮೀನು ಮಾರುಕಟ್ಟೆಯಿಂದ ಮನೆಗೆ ತೆರಳುತ್ತಿದ್ದ ಶಾರದಾನಗರ ನಿವಾಸಿ ಮೀನು ಕಾರ್ಮಿಕೆ ಗಂಗಾ (60) ಎಂಬವರ ಚಿನ್ನಾಭರಣವನ್ನು ದೋಚಲಾಗಿದೆ.

ನಿನ್ನೆ ಬೆಳಿಗ್ಗೆ 10.30ರ ವೇಳೆ  ರೈಲ್ವೇ ನಿಲ್ದಾಣ ಪರಿಸರದ ರಸ್ತೆಯಿಂದ ನಡೆದು ಹೋಗುತ್ತಿದ್ದಾಗ ಮಣಿಮುಂಡ ರೈಲ್ವೇ ಸಂಕದ ಬಳಿ ಹಿಂಬದಿಯಿಂದ ಬಂದ ಇಬ್ಬರು ವ್ಯಕ್ತಿಗಳು ಕೂದಲು ಮತ್ತು ಮುಖವನ್ನು ಹಿಡಿದು ಕತ್ತಿ ತೋರಿಸಿ ಬೆದರಿಸಿ ಕಿವಿಯಲ್ಲಿದ್ದ ಸುಮಾರು ಅರ್ಧ ಪವನ್ ತೂಕದ ಎರಡು ಬೆಂಡೋಲೆಗಳು, ಕುತ್ತಿಗೆಯಲ್ಲಿದ್ದ ಸರ ಮತ್ತು ಕೈಯಲ್ಲಿದ್ದ ಬಳೆಗಳನ್ನು ಲೂಟಿಗೈದು ಪರಾರಿಯಾಗಿದ್ದರು. ಈ ವೇಳೆ ಮಹಿಳೆ ಬೊಬ್ಬೆಹೊಡೆದಿದ್ದು, ಬಳಿಕ ಇತರರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಕಂಡರೆ ಗುರುತು ಹಚ್ಚಬಹುದಾದ ಇಬ್ಬರ ವಿರುದ್ಧ ಕೇಸು ದಾಖಲಿಸಿದ್ದಾರೆ. ಅಲ್ಲದೆ ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.

RELATED NEWS

You cannot copy contents of this page