ಕುಂಬಳೆ: ಪ್ರಸಿದ್ಧ ಕುಂಬಳೆ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಭಡ್ತಿಗೊಳಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಇಕ್ಕೇರಿ ನಾಯಕರ ರಾಜವಂಶದ ಆಡಳಿತ ವೇಳೆ ನಿರ್ಮಾಣಗೊಂಡಿದ್ದ ಹಾಗೂ ಮೈಸೂರು ರಾಜನಾಗಿದ್ದ ಟಿಪ್ಪು ಸುಲ್ತಾನ್ ಈ ಭಾಗಕ್ಕೆ ಬಂದಾಗ ತಂಗುತ್ತಿದ್ದ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಬೇಕೆಂಬ ಬೇಡಿಕೆಯೊಂದಿಗೆ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ರಂಗಕ್ಕಿಳಿದಿವೆ. ಕುಂಬಳೆ 1೦ನೇ ಶತಮಾನದಿಂದ 18ನೇ ಶತಮಾನದವರೆಗೆ ತುಳುವಂಶದ ಕೇಂದ್ರವಾಗಿತ್ತು. ಇತಿಹಾಸಗಳ ಪುಟದಲ್ಲಿ ಸೇರಿಕೊಂಡು ಮಹತ್ವ ಪಡೆದಿರುವ ಆರಿಕ್ಕಾಡಿಯ ಕೆಂಪುಕಲ್ಲು ಕೋಟೆಯು ಈಗ ಕೆಲವು ಭಾಗಗಳು ಮಾತ್ರ ಉಳಿದುಕೊಂಡಿವೆ. ಕುಂಬಳೆಯ ಪೂರ್ವ ಇತಿಹಾಸಕ್ಕೆ ಕುರುಹಾಗಿ ತಲೆಯೆತ್ತಿ ನಿಂತಿರುವ ಕೋಟೆಯನ್ನು ಸಂರಕ್ಷಿಸಲು ಸಾಂಸ್ಕೃ ತಿಕ ಕೇಂದ್ರದಿಂದ ಸಾಧ್ಯವಾಗಲಿದೆ ಯೆಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ. ಕುಂಬಳೆ ಪೇಟೆಯಿಂದ ಕೇವಲ ೧ ಕಿಲೋ ಮೀಟರ್ ದೂರದಲ್ಲಿ ಆರಿಕ್ಕಾಡಿ ಕೋಟೆಯಿದೆ. ಈ ಕೋಟೆಯ ಇತಿಹಾಸದ ಬೇರುಗಳನ್ನು ಹುಡುಕಿ ಕಾಲೇಜು ವಿದ್ಯಾರ್ಥಿಗಳ ಸಹಿತ ಸಂಶೋಧನಾ ತಂಡಗಳು ಇಲ್ಲಿಗೆ ತಲುಪುತ್ತಿದ್ದರೂ ಇವರಿಗೆ ಮೂಲ ಭೂತ ಸೌಕರ್ಯವಿಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ, ಕುಂಬಳೆ ಗಾಂಧಿ ಎಂದೇ ಕರೆಯಲ್ಪಡುವ ಮಾಧವ ಪೈ, ಕ್ರೀಡಾ ಭೂಪಟದಲ್ಲಿ ದೇಶದ ಸಾಧನೆಯನ್ನು ಸಾಬೀತು ಪಡಿಸಿದ ಕ್ರಿಕೆಟ್ ತಾರೆ ಅನಿಲ್ ಕುಂಬಳೆ ಎಂಬಿವರ ಹೆಸರಿನೊಂದಿಗೆ ಜಗತ್ತಿನಾದ್ಯಂತ ತಿಳಿಯಲ್ಪಡುವ ಕುಂಬಳೆ ಪ್ರದೇಶವು ತುಳುನಾಡಿನ ಹೃದಯ ಭೂಮಿಯಾಗಿದೆ. ಆದ್ದರಿಂದ ಆರಿಕ್ಕಾಡಿ ಕೋಟೆಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿ ಗೊಳಿಸಲು ಅನುಯೋಜ್ಯವಾದ ಪ್ರದೇಶ ಇದಾಗಿದೆಯೆಂದು ಕುಂಬಳೆ ಮಂಡಲ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರವಿ ಪೂಜಾರಿ ಸಾಂಸ್ಕೃತಿಕ ಇಲಾಖೆ ಸಚಿವ ಪಿ.ಸಿ. ವಿಷ್ಣುನಾಥ್‌ರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಆರಿಕ್ಕಾಡಿ ಕೋಟೆಯಲ್ಲಿ ರಾಜ್ಯ ಪ್ರವಾಸಿ ಇಲಾಖೆ, ಪುರಾವಸ್ತು ಸಂಶೋಧನಾ ಇಲಾಖೆ ಸಂಯುಕ್ತ ವಾಗಿ ಸ್ಥಳೀಯಾಡಳಿತ ಸಂಸ್ಥೆಯ ಸಹಾಯದೊಂ ದಿಗೆ ೨೦೦೩ರಲ್ಲಿ ಚೆರ್ಕಳಂ ಅಬ್ದುಲ್ಲ ಸಚಿವರಾಗಿದ್ದ ವೇಳೆ ಆರಿಕ್ಕಾಡಿ ಕೋಟೆಯನ್ನು ಅಭಿವೃದ್ಧಿಪ ಡಿಸಲು ಪ್ರಯತ್ನ ನಡೆದಿತ್ತು. ಆದರೆ ಈ ಯೋಜನೆ ಅನಂತರ ಮುಂದುವರಿಯ ಲಿಲ್ಲ. ಈಗ ಈ ಐತಿಹಾಸಿಕ ಸ್ಮಾರಕ ಕಾಡು ತುಂಬಿಕೊಂಡು ನಾಶದ ಹಂತದಲ್ಲಿದ್ದು, ಇದನ್ನು ಅಭಿವೃದ್ಧಿಪಡಿಸಬೇಕಾಗಿ ದೆಯೆಂದು ಮನವಿಯಲ್ಲಿ ಆಗ್ರಹಪಡಲಾಗಿದೆ.







