ಕಾಸರಗೋಡು: ತೀವ್ರ ಮಳೆ ಸುರಿಯುತ್ತಿದ್ದಂತೆ ಹೆಂಚಿನ ಮನೆಯೊಂದು ಕುಸಿದುಬಿದ್ದ ಘಟನೆ ಇಂದು ಮುಂಜಾನ್ಗೆ ಕೀಯೂರಿನಲ್ಲಿ ಸಂಭವಿಸಿದೆ. ಈ ವೇಳೆ ಮನೆಯೊಳಗೆ ನಿದ್ರಿಸುತ್ತಿದ್ದ ರೋಗಿ ಸಹಿತ ೫ ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಇಂದು ಮುಂಜಾನೆ ೪ ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ. ನಿದ್ದೆಯಲ್ಲಿದ್ದಾಗ ಮನೆಯ ಮೇಲ್ಛಾವಣಿ ಕುಸಿಯುವ ಸದ್ದು ಕೇಳಿದ್ದು, ಕೂಡಲೇ ಕುಟುಂಬ ಹೊರಗೆ ಓಡಿದ್ದು ಇದರಿಂದ ಅಪಾಯದಿಂದ ಪಾರಾಗಿದ್ದಾರೆ. ಕೀಯೂರು ಕಡಪ್ಪುರ ಶ್ರೀ ಸುಬ್ರಹ್ಮಣ್ಯ ಮಠ ಸಮೀಪದ ಕುಂಞಿಕೃಷ್ಣನ್ ಎಂಬವರ ಮನೆ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಕುಂಞಿಕೃಷ್ಣನ್, ಇವರ ಪತ್ನಿ ಶಾರಿಕ, ಹಾಸಿಗೆ ಹಿಡಿದಿರುವ ರೋಗಿಯಾದ ಸಹೋದರ ಶಾಜಿ, ಮಕ್ಕಳಾದ ಸಚ್ಚು, ಕಿಚ್ಚು ಎಂಬಿವರಿದ್ದರು. ಘಟನೆ ಮಾಹಿತಿ ಲಭಿಸಿ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲಿರುವ ಕ್ರಮ ಆರಂಭಿಸಲಾಗಿದೆ.






