ಪೆರ್ಲ: ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸರಕಾರ, ಅಧಿಕಾರಿ ಗಳಿಗೆ ಕೇವಲ ಮನವಿ ಸಲ್ಲಿಸಿದರೆ ಮಾತ್ರ ನಮ್ಮ ಜವಾಬ್ದಾರಿ ಮುಗಿಯದು. ರಸ್ತೆ ಹೀನಾಯ ಸ್ಥಿತಿಯನ್ನು ಸರಕಾರಕ್ಕೆ ಗಮನಕ್ಕೆ ತಂದು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸಿದರೂ ಪ್ರಯೋಜನ ವಾಗದಿದ್ದರೆ ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಬೇಕೆಂದು ಜಿಲ್ಲಾ ಪಂ. ಸದಸ್ಯ ಸೋಮಶೇಖರ್ ಜೆ.ಎಸ್. ನುಡಿದರು. ಪೆರ್ಲ-ಸ್ವರ್ಗ ಅಂತಾರಾಜ್ಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ನಡೆದ ನಾಗರಿಕ ಕ್ರಿಯಾ ಸಮಿತಿ ರಚನೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕೆಎಸ್ಇಬಿ ವತಿಯಿಂದ ತೋಟ ಗಾರಿಕಾ ನಿಗಮದ ರಬ್ಬರ್ ತೋಟದ ಮೂಲಕ ಹಾದು ಹೋಗುತ್ತಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಅಗೆದ ಮಣ್ಣು ಕೆಳ ಪ್ರದೇಶದ ಮನೆ, ತೋಟಕ್ಕೆ ನುಗ್ಗುವ ಆತಂಕ ಎದುರಾಗಿದೆಯೆಂದು ಕಿಶೋರ್ ಕೋಟೆ ಆತಂಕ ವ್ಯಕ್ತಪಡಿಸಿದರು. ಎಣ್ಮಕಜೆ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಬಿ.ಯವರ ಅಧ್ಯಕ್ಷತೆ ಯಲ್ಲಿ ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸ್ಥಳೀಯರು ಭಾಗವಹಿಸಿದರು. ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ವಿಜಯ ಕೆ., ಸದಾನಂದ ಶೆಟ್ಟಿ ಕುದ್ವ, ಬ್ಲೋಕ್ ಪಂಚಾಯತ್ ಸದಸ್ಯೆ ವಿದ್ಯಾಕುಮಾರಿ, ಪಂಚಾಯತ್ ಸದಸ್ಯೆ ನಳಿನಾಕ್ಷಿ ಸಿ.ಸಿ., ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್. ಗಾಂಭೀರ್ ಮಾತನಾಡಿದರು. ಕೆ.ವೈ. ಸುಬ್ರಹ್ಮಣ್ಯ ಭಟ್, ರಮಾನಂದ ಎಡಮಲೆ, ವೆಂಕಟ್ರಮಣ ಭಟ್, ಸದಾನಂದ ಬೈರಡ್ಕ, ಈಶ್ವರ ಪ್ರಸಾದ್ ಪಂಬೆತ್ತಡ್ಕ, ಕೃಷ್ಣ ಕುಮಾರ್ ನೆಕ್ಕರೆಕಾಡು, ನಾಗರಾಜ ಬಾಳಿಕೆ, ಶಿವಪ್ರಕಾಶ್ ಪಾಲೆಪ್ಪಾಡಿ ಅಭಿಪ್ರಾಯ ಮಂಡಿಸಿದರು.
ಕ್ರಿಯಾ ಸಮಿತಿಗೆ ಅಧ್ಯಕ್ಷರಾಗಿ ಸೋಮಶೇಖರ ಜೆ.ಎಸ್., ಸಂಚಾಲಕರಾಗಿ ವಾರ್ಡ್ ಪ್ರತಿನಿಧಿ ರಾಮಚಂದ್ರ ಎಂ. ಆಯ್ಕೆಯಾದರು. ರಾಮಚಂದ್ರ ಎಂ. ಸ್ವಾಗತಿಸಿ, ಮಾಜಿ ಸದಸ್ಯ ರವಿ ವಾಣಿನಗರ ವಂದಿಸಿದರು.






