ಉಪ್ಪಳ: ವರ್ಕಾಡಿ ನೀರೊಳಿಕೆಯಲ್ಲಿ ಹಲಸಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಸ್ ಚಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಂಗಳೂರು ಕುಲಶೇಖರ ಕಕ್ಕೆಬೆಟ್ಟು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ದಿ| ಕೃಷ್ಣ ನಾಯಕ್ರ ಪುತ್ರ ಅವಿನಾಶ್ ನಾಯಕ್ (32) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಮಂಗಳೂರು-ಬೆಳಗಾವಿ ರೂಟ್ನಲ್ಲಿ ಸಂಚರಿಸುವ ಖಾಸಗಿ ಬಸ್ ಚಾಲಕನಾಗಿದ್ದರು. ಇವರು ವರ್ಕಾಡಿ ನೀರೊಳಿಕೆಯಲ್ಲಿರುವ ಪತ್ನಿ ಮನೆಗೆ ಜೂನ್ ೧೪ರಂದು ಬಂದಿದ್ದರು. ಅಂದು ಮಧ್ಯಾಹ್ನ ಅಲ್ಲಿ ಹಲಸಿನ ಕಾಯಿ ಕೊಯ್ಯಲೆಂದು ಮರವೇರಿದ್ದರು. ಈ ವೇಳೆ ಮರದ ರೆಂಬೆ ತುಂಡಾಗಿ ಅವಿನಾಶ್ ಕೆಳಕ್ಕೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೊನ್ನೆ ಮಧ್ಯಾಹ್ನ ಇವರು ಮೃತಪಟ್ಟರು. ಮೃತದೇಹವನ್ನು ಮುಡಿಪುನಲ್ಲಿರುವ ಸಂಬಂಧಿಕ ಉಮೇಶ್ ನಾಯಕ್ರ ಮನೆಗೆ ಕೊಂಡೊಯ್ದು ಬಳಿಕ ಹೂಹಾಕುವಕಲ್ಲು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ತಾಯಿ ಉಷಾ, ಪತ್ನಿ ಪವಿತ್ರ, ನಾಲ್ಕು ತಿಂಗಳ ಗಂಡು ಮಗು ಪೃಥ್ವಿ, ಸಹೋದರ ಕಿರಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






