ಕಾಸರಗೋಡು: ಜಿಲ್ಲಾ ವಿಕೋಪ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರ ಸಭೆ ಸೇರಿ ಮಳೆಗಾಲಕ್ಕೆ ಸಂಬಂಧಿಸಿದ ಜಿಲ್ಲೆಯ ಸ್ಥಿತಿಗತಿಗಳ ಮೌಲೀಕರಣ ನಡೆಸಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಅಧಿಕಾರಿಗಳು ಫೀಲ್ಡ್‌ನಲ್ಲಿ ಇದ್ದರು ಎಂದು ಎಲ್ಲಾ ಚಟುವಟಿಕೆಗಳನ್ನು ಸೂಕ್ತವಾಗಿ ಸಂಯೋಜಿಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇನ್ನೆರಡು ದಿನ ಕೂಡಾ ಜಾಗ್ರತೆಯೊಂದಿಗೆ ಕಾರ್ಯಾಚರಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ, ಎಡಿಎಂ ಪಿ. ಉದಯಕುಮಾರ್, ಕಾಞಂಗಾಡ್ ಆರ್‌ಡಿಒ ಸುದೀಪ್, ಕಾಸರಗೋಡು ಆರ್‌ಡಿಒ ವಿಜು ಕುಮಾರ್, ಎಲ್.ಎಸ್.ಜಿ.ಡಿ. ಜೋಯಿಂಟ್ ಡೈರೆಕ್ಟರ್ ಕೆ.ವಿ. ಹರಿದಾಸ್, ಡಿವಿಶನಲ್ ಫಾರೆಸ್ಟ್ ಆಫೀಸರ್ ಜೋಸ್ ಮ್ಯಾಥ್ಯು, ಫಿಶರೀಸ್ ಡೆಪ್ಯುಟಿ ಡೈರೆಕ್ಟರ್ ಶೈನಿ, ಜಿಲ್ಲಾ ವೈದ್ಯಾಧಿಕಾರಿ ಕೆ.ಟಿ. ರೇಖ ಸಹಿತ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು. ಮಂಜೇಶ್ವರ ತಹಶೀಲ್ದಾರ್ ಎಲ್.ಕೆ. ಸುಬೈರ್, ಕಾಸರಗೋಡಿನ ತಹಶೀಲ್ದಾರ್ ಬಿ. ಶ್ರೀಕುಮಾರ್, ಹೊಸದುರ್ಗದ ಕೆ. ರಮೇಶನ್, ವೆಳ್ಳರಿಕುಂಡ್‌ನ ಕೆ.ಬಿ. ರಾಮು ಭಾಗವಹಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಐದು ಕ್ಯಾಂಪ್‌ಗಳು ಕಾರ್ಯಾಚರಿಸುತ್ತಿದೆ. ವೆಳ್ಳೆರಿಕುಂಡ್ ತಾಲೂಕಿನಲ್ಲಿ ಮೂರು ಕ್ಯಾಂಪ್, ಹೊಸದುರ್ಗ ತಾಲೂಕಿನಲ್ಲಿ ಎರಡು ಕ್ಯಾಂಪ್ ಕಾರ್ಯಾಚರಿಸುತ್ತಿದೆ. ಇದರಲ್ಲಿ ೫೯ ಕುಟುಂಬಗಳ 208 ಮಂದಿ ಇದ್ದಾರೆ. ಇವರಲ್ಲಿ 85 ಪುರುಷರು, 93 ಮಂದಿ ಮಹಿಳೆಯರು, 34 ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 11 ಮನೆಗಳು ಆಂಶಿಕವಾಗಿ ಹಾನಿಯಾಗಿವೆ. ಮಂಜೇಶ್ವರ ತಾಲೂಕಿನಲ್ಲಿ 3 ಮನೆಗಳು ಹಾನಿಯಾಗಿವೆ. ಮಧೂರು, ಕಾರ್ಯಂಗೋಡು ಹೊಳೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ದಡ ಪ್ರದೇಶದಲ್ಲಿ ವಾಸಿಸುವವರು ಸಂಬಂಧಿಕರ ಮನೆಗೆ ತೆರಳಬೇಕೆಂದು ನಿರ್ದೇಶಿಸಲಾಗಿದೆ.







