ಕಾಸರಗೋಡು: ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಹನ್ನೊಂದಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಜಿಲ್ಲೆಯ ಮಲೆನಾಡು ಪ್ರದೇಶವಾದ ಚೆರ್ವತ್ತೂರು ಸಮೀಪದ ಮಯೀಚ್ಚದಲ್ಲಿ ಭೂಕುಸಿತ ಉಂಟಾಗಿದ್ದು ಇದರಿಂದ ಅಲ್ಲಿನ ೩೩ರಷ್ಟು ಕುಟುಂಬಗಳನ್ನು ನಿನ್ನೆ ರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ೪೦ರಷ್ಟು ಮನೆಯವರು ನೆರೆ ಭೀತಿಯಲ್ಲಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಮಳೆಗೆ ಭೂಕುಸಿತ ಉಂಟಾದ ಪರಿಣಾಮ ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದಾವೃತವಾಗಿದೆ. ದೇಲಂಪಾಡಿ ಗ್ರಾಮದ ಊಜಂಪಾಡಿಯಲ್ಲಿ ಮನೆಯೊಂದು ಆಂಶಿಕವಾಗಿ ಕುಸಿದಿದ್ದು ಇದರಿಂದ ಅಶ್ವಿನಿ(14) ಎಂಬ ಬಾಲಕಿ ಗಾಯಗೊಂಡಿದ್ದಾಳೆ. ಹೊಸದುರ್ಗ, ವೆಳ್ಳರಿಕುಂಡ್ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಸುರಿದಿದೆ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಸಾಧಾರಣ ರೀತಿಯ ಮಳೆ ಸುರಿಯುತ್ತಿದೆ. ನೆರೆ ಹಾವಳಿ ಎದುರಿಸುತ್ತಿರುವ ಹೊಸದುರ್ಗ ಮತ್ತು ವೆಳ್ಳರಿಕುಂಡ್ ತಾಲೂಕುಗಳಲ್ಲಾಗಿ ಎಂಟು ಸಂತ್ರಸ್ತ ಶಿಬಿರಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ 132 ಪುರುಷರು, 143 ಮಹಿಳೆಯರು ಮತ್ತು ೫೦ ಮಕ್ಕಳು ಸೇರಿದಂತೆ ಒಟ್ಟಾರೆಯಾಗಿ 88 ಕುಟುಂಬಗಳ ೩೨೫ ಮಂದಿಯಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕದಳ, ಪೊಲೀಸರು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ನಿರತರಾಗಿದ್ದಾರೆ. ಕಾರ್ಯಂಗೋಡು ನದಿ ಭಾರೀ ಪ್ರವಾಹದಿಂದ ಹರಿಯುತ್ತಿದೆ. ಇದರಿಂದಾಗಿ ಹೊಳೆಯ ದಡದಲ್ಲಿರುವ ಮನೆಗಳಿಗೆ ಜಾಗ್ರತಾ ನಿರ್ದೇಶ ನೀಡಲಾಗಿದೆ. ಭಾರೀ ಮಳೆಯಿಂದಾಗಿ ಮನೆಗಳು ಮಾತ್ರವಲ್ಲದೆ ಕೃಷಿಯೂ ಹಾನಿಗೀಡಾಗಿವೆ. ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತ ಇಂದು ರಜೆ ಘೋಷಿಸಿದೆ.
ಕಾಸರಗೋಡು ತಾಲೂಕಿನಲ್ಲಿ ಎರಿಂಞ್ಞಿಪುಳ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಆ ಪ್ರದೇಶದಲ್ಲಿ ಜಾಗ್ರತಾ ನಿರ್ದೇಶನೀಡಲಾಗಿದೆ.






