ಕುಂಬಳೆ: ಸರಕಾರ, ಆರೋಗ್ಯಸಚಿವ ಬದಲಾವಣೆಯಾಗುವುದಲ್ಲದೆ ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಯಾವುದೇ ಬದಲಾವಣೆ ಉಂಟಾಗುತ್ತಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಜಿಲ್ಲೆಯ ಹೆಚ್ಚಿನ ಆರೋಗ್ಯ ಕೇಂದ್ರಗಳು ಕೂಡಾ ವೆಂಟಿಲೇಟರ್, ಐಸಿಯುವಿನಲ್ಲಾಗಿದೆ ಎಂದು ಇವರು ಅಭಿಪ್ರಾಯಪಡುತ್ತಾರೆ. ಜ್ವರ ತಗಲಿ ಆಸ್ಪತ್ರೆಗೆ ತಲುಪುವ ರೋಗಿಗಳನ್ನು ತಪಾಸಣೆ ನಡೆಸಲು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಡಾಕ್ಟರ್‌ಗಳಿಲ್ಲ. ಜಿಲ್ಲೆಯ ಹೆಚ್ಚಿನ ಆರೋಗ್ಯ ಕೇಂದ್ರಗಳಲ್ಲೂ ಡಾಕ್ಟರ್‌ಗಳ ಕುರ್ಚಿ ಖಾಲಿಯಾಗಿವೆ. ಇದನ್ನು ಭರ್ತಿಗೊಳಿಸಲು ಯಾವುದೇ ಕ್ರಮವೂ ಉಂಟಾಗುತ್ತಿಲ್ಲ.
ಕುಂಬಳೆಯ ತೀರ ವಲಯದ ಸರಕಾರದ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಕಳೆದೆರಡು ದಶಕಗಳಿಂದ ಅವಗಣನೆಯ ಕಹಿ ನೀರು ಕುಡಿಯುತ್ತಿದೆ. ದಿನಂಪ್ರತಿ ಈ ಆಸ್ಪತ್ರೆಗೆ ೩೦೦ಕ್ಕೂ ಹೆಚ್ಚು ರೋಗಿಗಳು ತಲುಪುತ್ತಿದ್ದಾರೆ. ಕಾಸರಗೋಡು ಬ್ಲೋಕ್ ಪಂಚಾಯತ್‌ಗೆ ಈ ಆರೋಗ್ಯ ಕೇಂದ್ರದ ಆಡಳಿತ ನಿರ್ವಹಣೆಯ ಹೊಣೆ ಇದೆ. ಆದರೆ ಬ್ಲೋಕ್ ಪಂಚಾಯತ್ ಈ ಆಸ್ಪತ್ರೆ ಅಭಿವೃದ್ಧಿಗಾಗಿ ಏನನ್ನೂ ಕೈಗೊಳ್ಳುತ್ತಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಹಲವಾರು ಯೋಜನೆ ಗಳನ್ನು ಘೋಷಿಸಲಾಗುತ್ತಿದೆ. ಈ ಮೊದಲು ೧೪ ಕೋಟಿ ರೂ.ಗಳ ಯೋ ಜನೆ ಸಮರ್ಪಿಸಿದಾಗ ರಾಜ್ಯ ಸರಕಾರದ ಪಾಲು ಆದ ೪೦ ಶೇ.ವನ್ನು ರಾಜ್ಯ ಸರಕಾರವೇ ವಹಿಸಿಕೊಳ್ಳಬೇಕೆಂದು ಕೇಂದ್ರ ನಿರ್ದೇಶಿಸಿತ್ತು. ಈ ಹಿಂದಿನ ಸರಕಾರ ಇದಕ್ಕೆ ಬೆನ್ನು ಹಾಕಿತು. ಬಳಿಕ ೫.೪೦ ಕೋಟಿ ರೂ.ಗಳ ಯೋಜನೆ ಮಂಜೂರು ಮಾಡಿರುವುದಾಗಿ ಹೇಳಲಾಯಿತು. ಹಲವು ಕಾಲ ಇದನ್ನು ಹೇಳುತ್ತಾ ದಿನ ಕಳೆಯಲಾಗಿದೆ. ಯೋಜನೆಗಳಿಗೆ ಕೋಟ್ಯಂತರ ರೂ. ಮಂಜೂರು ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆಗಳನ್ನು ಹೊರಡಿಸುವುದಲ್ಲದೆ ಯಾವುದೇ ಕ್ರಮ ಕಂಡುಬರುತ್ತಿಲ್ಲ. ರೋಗ ಹರಡುವುದರಲ್ಲಿ ಜಾಗರೂಕತೆ ವಹಿಸಬೇಕೆಂದು ಡಿಎಂಒ ಆಗ್ರಹಿಸುತ್ತಿದ್ದಾರೆ.
ಆದರೆ ಚಿಕಿತ್ಸೆಗೆ ವ್ಯವಸ್ಥೆ ಸಿದ್ಧಪಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಒತ್ತಡ ಹಾಕಿ ಸರಕಾರದಿಂದ ಪಡೆದುಕೊಳ್ಳಲು ಬ್ಲೋಕ್ ಪಂಚಾಯತ್‌ಗೂ ಸಾಧ್ಯವಾಗುತ್ತಿಲ್ಲ. ಎಚ್೧, ಎನ್೧ ಸಹಿತದ ರೋಗ ಬೆದರಿಕೆಯನ್ನು ಜಿಲ್ಲೆ ಎದುರಿಸುತ್ತಿದೆ. ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿರುವ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ (ಓಲ್ಡ್ ಸಿಎಚ್‌ಸಿ) ಕಳೆದ ವರ್ಷದಿಂದ ಬ್ಲೋಕ್ ಫ್ಯಾಮಿಲಿ ಸೆಂಟರ್ ಆಗಿ ಭಡ್ತಿಗೊಳಿಸಲಾಗಿತ್ತು. ತೀರ ದೇಶ ವಲಯದ ಮೀನುಕಾರ್ಮಿಕರು ಸಹಿತದ ಸಮೀಪ ಪ್ರದೇಶದ ಕೃಷಿಕರು, ಮಕ್ಕಳು, ವ್ಯಾಪಾರಿಗಳು ರೋಗ ತಗಲಿದರೆ ಈ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದಾರೆ. ಹೆಂಚು ಹಾಸಿದ ಸುಮಾರು ೬೮ ವರ್ಷ ಹಳೆಯದಾದ ಆಸ್ಪತ್ರೆಯ ಪ್ರಧಾನ ಕಟ್ಟಡ ಸೋರುವುದರಿಂದಾಗಿ ಕಳೆದ ವರ್ಷ ಇದನ್ನು ಮುಚ್ಚಲಾಯಿತು. ಈ ಮೊದಲು ಇದ್ದ ದಾಖಲಾತಿ ಚಿಕಿತ್ಸೆ ಈಗ ಇಲ್ಲಿಲ್ಲ.





