ಬದಿಯಡ್ಕ: ಆಧುನಿಕ ಸಮಾಜದಲ್ಲಿ ವಿಶೇಷವಾಗಿ ಯುವಕರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಮಾದಕವ್ಯಸನ, ಡಿಜಿಟಲ್ ವ್ಯಸನಕ್ಕೆ ಆರೋಗ್ಯಕರ ಪರ್ಯಾಯ ಕಂಡುಕೊಳ್ಳುವ ಉದ್ಧೇಶದೊಂದಿಗೆ ರಾಜ್ಯ ಸರಕಾರದ 1೦೦ ದಿನಗಳ ಕ್ರಿಯಾ ಯೋಜನೆಗಳ ಅಂಗವಾಗಿ ಬಿಡುವಿನ ಸಮಯವನ್ನು ಸೃಜನಶೀಲ ಮತ್ತು ಆರೋಗ್ಯಕರ ಮನರಂಜನೆಯಲ್ಲಿ ಕಳೆಯಲು ಸೂಕ್ತ ಸ್ಥಳವನ್ನು ಒದಗಿಸುವ ಯೋಜನೆಗೆ ಬದಿಯಡ್ಕದಲ್ಲಿ ಸ್ಥಳ ಗುರುತಿಸಲಾಯಿತು. ಬೋಳುಕಟ್ಟೆ ಮೈದಾನದ ಸಮೀಪ ಅಬಕಾರಿ ಇಲಾಖೆ ಸಹಕಾರದೊಂದಿಗೆ ಮಿನಿ ಪಾರ್ಕ್ ನಿರ್ಮಾಣ ಉದ್ದೇಶಿಸಲಾಗಿದೆ. ಇಲ್ಲಿ ಸಮಾಜದ ವಿವಿಧ ವರ್ಗದ ಜನರು, ಯುವಕರು, ಮಕ್ಕಳು, ವೃದ್ಧರು ಸುರಕ್ಷಿತವಾಗಿ ಸಮಯವನ್ನು ಸದುಪಯೋಗಪಡಿಸಬಹುದಾಗಿದೆ. ಸ್ಥಳ ಗುರುತಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷ ಡಿ. ಶಂಕರ ನಿರ್ವಹಿಸಿದರು. ಉಪಾಧ್ಯಕ್ಷೆ ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಇನ್ಸ್ಪೆಕ್ಟರ್ ಜಿಷ್ಣೋ ಪಿ.ಆರ್., ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಬಿ.ಎಂ. ಅಬ್ದುಲ್ಲ ಕುಂಞಿ, ಶ್ರೀನಿವಾಸನ್ ಸಹಿತ ಹಲವರು ಉಪಸ್ಥಿತರಿದ್ದರು.







