ಕಾಸರಗೋಡು: ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿ ಸಲ್ಪಟ್ಟ ಪೊಲೀಸ್ ಸಿಬ್ಬಂದಿಯೋರ್ವ ಮೊಬೈಲ್ ಫೋನ್ ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾಗಿದ್ದಾನೆ. ಅನ್ನೂರು ಪುದಿಯಂಕಾವ್ನ ವೆಳ್ಳೋರ ಮಠತ್ತಿಲ್ನ ವಿ.ಎಂ. ವಿಪಿನ್ ಕುಮಾರ್ (40) ಎಂಬಾತ ಸೆರೆಗೀಡಾದ ಆರೋಪಿ. ಈತ ಈ ಹಿಂದೆ ಕುಂಬಳೆ ಠಾಣೆಯಲ್ಲಿ ಪೊಲೀಸ್ ಆಗಿದ್ದನು. ಉದ್ಯೋಗಕ್ಕೆ ಸೇರ್ಪಡೆಗೊಂಡ ಬಳಿಕ ವಿಪಿನ್ ಕು ಮಾರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲವೆನ್ನಲಾಗಿದೆ. ಅಲ್ಲದೆ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಈತನನ್ನು ಅಮಾನತುಗೊಳಿಸಿದ್ದು, ಸೇವೆಯಿಂದ ವಜಾಗೊಳಿಸಲಿರುವ ಕ್ರಮಗಳು ನಡೆಯುತ್ತಿದೆ.
ಕಳೆದ ಗುರುವಾರ ಬೆಳಿಗ್ಗೆ ತಳಿಪರಂಬ ಶ್ರೀ ರಾಜರಾಜೇಶ್ವರ ಕ್ಷೇತ್ರ ದರ್ಶನಕ್ಕೆ ತಲುಪಿದ ಚಿಟ್ಟಾರಿಕ್ಕಲ್ ನಿವಾಸಿಯಾದ ಜ್ಯೋತಿಷಿಯ ಮೊಬೈಲ್ ಫೋನ್ ಕಳವು ನಡೆಸಿದ ಪ್ರಕರಣದಲ್ಲಿ ವಿಪಿನ್ ಕುಮಾರ್ನನ್ನು ಬಂಧಿಸಲಾಗಿದೆ. ಈ ಹಿಂದೆ ಅನ್ನೂರಿನಲ್ಲಿ ಮೊಬೈಲ್ ಫೋನ್ ಕಳವು ಸಂಬಂಧ ಪಯ್ಯನ್ನೂರು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಎಸ್ಎಸ್ಎಲ್ಸಿ ಹಳೆ ವಿದ್ಯಾರ್ಥಿ ಸಂಗಮದಲ್ಲಿ ಪಾಲ್ಗೊಂಡ ಈತ ಅಲ್ಲಿಗೆ ತಲುಪಿದ ಓರ್ವೆ ಯುವತಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಬಳಿಕ ಆಕೆಯ ಚಿನ್ನಾಭರಣಗಳನ್ನು ಲಪಟಾಯಿಸಿರು ವುದಾಗಿಯೂ ದೂರಲಾಗಿದೆ. ಅಲ್ಲದೆ ಕಳೆದ ತಿಂಗಳ 31ರಂದು ತೃಚ್ಚಂಬರ ಶ್ರೀಕೃಷ್ಣ ಕ್ಷೇತ್ರದ ಕಾಣಿಕೆಹುಂಡಿ ಒಡೆದು ಹಣ ಕಳವುಗೈದ ಪ್ರಕರಣ ದಲ್ಲೂ ಈತ ಆರೋಪಿಯಾಗಿ ದ್ದಾನೆ. ಅನಂತರ ಕ್ಷೇತ್ರಕ್ಕೆ ತಲುಪಿದ ಓರ್ವ ಭಕ್ತನ ಮೊಬೈಲ್ ಫೋನ್ ಕೂಡಾ ಈತ ಕಳವು ನಡೆಸಿದ್ದಾನೆನ್ನಲಾಗಿದೆ. ತೃಚ್ಚಂಬರ ಕ್ಷೇತ್ರ ಹಾಗೂ ರಾಜರಾಜೇಶ್ವರ ಕ್ಷೇತ್ರಗಳಲ್ಲಿ ನಡೆದ ಮೊಬೈಲ್ ಫೋನ್ ಕಳವು ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಕಳವು ನಡೆಸಿರುವುದು ವಿಪಿನ್ ಕುಮಾರ್ ಆಗಿದ್ದಾನೆಂದು ತಿಳಿದುಬಂದಿತ್ತು. ತಳಿಪರಂಬ ಡಿವೈಎಸ್ಪಿ ಟಿ.ಪಿ. ಸುಮೇಶ್ರ ನಿರ್ದೇಶ ಪ್ರಕಾರ ಸಿಐ ಶ್ರೀಹರಿ, ಎಸ್ಐಗಳಾದ ಸ್ಯಾಮ್ಸನ್, ಗೋಪಿನಾಥನ್, ಬಾಲಕೃಷ್ಣನ್ ಮೊದಲಾದವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ಕೈಯಿಂದ ೩ ಮೊಬೈಲ್ ಫೋನ್ ಹಾಗೂ ೬ ಸಾವಿರ ರೂ.ಗಳನ್ನು ವಶಪಡಿಸಲಾಗಿದೆ.






