ತೀವ್ರಗೊಂಡ ವಿದ್ಯುತ್ ಬಿಕ್ಕಟ್ಟು: ತುರ್ತು ಪರಿಹಾರಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ತೀವ್ರ ಕ್ರಮ

ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ನಿರಂತರವಾಗಿ ಪರಾಕಾಷ್ಟೆಗೇರುತ್ತಿರುವುದು ತೀವ್ರ ಜನಾಕ್ರೋಶಕ್ಕೆ ಕಾರಣವಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ಅದಕ್ಕೆ ತುರ್ತು ಪರಿಹಾರ ಕಂಡುಕೊಳ್ಳಲು ಸ್ವತಃ ಮುಖ್ಯಮಂತ್ರಿ ವಿ.ಡಿ ಸತೀಶನ್‌ರೇ ನೇರವಾಗಿ ರಂಗಕ್ಕಿಳಿದಿದ್ದಾರೆ. ಇದರಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಬಿಶ್ವನಾಥ್ ಸಿನ್ಹಾ, ರಾಜ್ಯ ವಿದ್ಯುನ್ಮಂಡಳಿ ಆಡಳಿತ ನಿರ್ದೇಶಕ ಎಂ.ಜಿ. ರಾಜಮಾಣಿಕ್ಯಂರನ್ನು ಮುಖ್ಯಮಂತ್ರಿ ನೇರವಾಗಿ ಕರೆಸಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ತುರ್ತು ನಿರ್ದೇಶ ನೀಡಿದ್ದಾರೆ. ವಿದ್ಯುತ್ ಕೊರತೆ ನೀಗಿಸಲು ಹೊರಗಿನಿಂದ ಸ್ವಂತವಾಗಿ ಅಗತ್ಯದಷ್ಟು ವಿದ್ಯುತ್ ಖರೀದಿಸಲು, ಅದಕ್ಕೆ ತಗಲಿರುವ ವೆಚ್ಚ, ಅದಕ್ಕೆ ರಾಜ್ಯ ವಿದ್ಯುತ್ ಪ್ರಾಧಿಕಾರದ ಅನುಮತಿ ಇತ್ಯಾದಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಮಸ್ಯೆಗೆ ಕಂಡುಕೊಳ್ಳಲು ವಿದ್ಯುನ್ಮಂಡಳಿ ಕೈಗೊಳ್ಳುವ ಎಲ್ಲಾ ಪ್ರಯತ್ನಗಳಿಗೆ ಸರಕಾರ ಪೂರ್ಣ ಬೆಂಬಲ ನೀಡಲಿದೆ ಎಂದೂ, ಇದಕ್ಕೆ ಸರಿಯಾದ ರೀತಿಯ ಯೋಜನೆಗೂ ರೂಪು ನೀಡುವಂ ತೆಯೂ ಮುಖ್ಯಮಂತ್ರಿ ನಿರ್ದೇಶ ನೀಡಿದ್ದಾರೆ.

ರಾಜ್ಯ ಈಗ ಅಗತ್ಯಕ್ಕಿಂತಲೂ ೬೮೦ ಮೆಘಾವಾಟ್‌ನಷ್ಟು ವಿದ್ಯುತ್ ಕೊರತೆ ಎದುರಿಸುತ್ತಿದೆ. ರಾಜ್ಯದ ಒಟ್ಟು ವಿದ್ಯುತ್‌ನ ಅಗತ್ಯ ಈಗ ೫೪೫೦ ಮೆಘಾವಾಟ್‌ರೇಗಿದೆ. ನಿನ್ನೆ ಮಾತ್ರವಾಗಿ ರಾಜ್ಯದಲ್ಲಿ 96.40 ದಶಲಕ್ಷ ಯೂನಿಟ್ ವಿದ್ಯುತ್ ಉಪಯೋಗಿಸ ಲಾಗಿದೆ. ಇದು ಈ ವರ್ಷ ಅತೀ ಹೆಚ್ಚು ವಿದ್ಯುತ್ ಉಪಯೋಗದ ದಾಖಲೆಯನ್ನು ಮುರಿದಿದೆ.  ಈ ಸ್ಥಿತಿ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಆ ದಾಖಲೆಯೂ ಮುರಿಯಲ್ಪಡಲಿದೆ ಎಂಬ ಕಳವಳವನ್ನು ವಿದ್ಯುನ್ಮಂಡಳಿ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಕಮ್ಯೂನಿಟಿ ಬ್ಯಾಟರಿ ಸಿಸ್ಟಂ ಜ್ಯಾರಿಗೊಳಿಸಲಾಗುವುದೆಂದು ಇನ್ನೊಂದೆಡೆ ರಾಜ್ಯ ವಿದ್ಯುತ್ ಖಾತೆ ಸಚಿವ ಸನ್ನಿಜೋಸೆಫ್ ಇಂದು ಬೆಳಿಗ್ಗೆ ಸುದ್ಧಿಗಾರರಲ್ಲಿ ತಿಳಿಸಿದ್ದಾರೆ. ಸೌರ ಪ್ಯಾನಲ್ ವಿದ್ಯುತ್ ಉತ್ಪಾದಿಸುವ ಮನೆಗಳು ಹೆಚ್ಚುವರಿ ವಿದ್ಯುತನ್ನು ವಿದ್ಯುನ್ಮಂಡಳಿ ನೀಡಿದಲ್ಲಿ ಅದಕ್ಕೆ ಉತ್ತಮ ರೀತಿಯ ಬೆಲೆ ನೀಡಲಾಗುವುದು. ಮನೆಗಳು ಹಾಗೂ ಇತರ ಕಟ್ಟಡಗಳಲ್ಲಿ ಸೌರ ಪ್ಯಾನಲ್‌ಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಇನ್ನಷ್ಟು ಪ್ರೋತ್ಸಾಹ ನೀಡಲಾಗುವುದು. ಸದ್ಯ ವಿದ್ಯುತ್ ಬಳಕೆಯನ್ನು ಜನರು ಗರಿಷ್ಠ ಮಟ್ಟದಲ್ಲಿ ಇಳಿಸಿ ಸಹಕರಿಸಬೇಕೆಂದೂ ಇದೇ ಸಂದರ್ಭದಲ್ಲಿ ಸಚಿವರು  ಮತ್ತೆ ವಿನಂತಿಸಿಕೊಂಡಿದ್ದಾರೆ.

You cannot copy contents of this page