ಒಂದೇ ನಂಬ್ರಪ್ಲೇಟ್ ಅಳವಡಿಸಿದ ಎರಡು ವಾಹನಗಳ ವಶ : ತನಿಖೆ ಆರಂಭಿಸಿದ ಪೊಲೀಸ್

ಉಪ್ಪಳ: ಒಂದೇ ರಿಜಿಸ್ಟರ್ ನಂಬ್ರ ಹೊಂದಿರುವ ಎರಡು ಥಾರ್ ಜೀಪುಗಳನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು

ತನಿಖೆ ನಡೆಸುತ್ತಿದ್ದಾರೆ. ಕೆ.ಎಲ್. 14ಎಜೆ3008 ನಂಬ್ರದ ಎರಡು ಥಾರ್ ಜೀಪುಗಳು ಉಪ್ಪಳ ಕೈಕಂಬದಲ್ಲಿ ಕಂಡುಬಂದಿದ್ದು, ಈ ಮಾಹಿತಿಯನ್ನು ಸ್ಥಳೀಯರು  ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಸ್ಟೇಶನ್ ಹೌಸ್ ಆಫೀಸರ್  ವಿಷ್ಣು, ಎಸ್‌ಐ ಶಬರಿಕೃಷ್ಣ ಎಂಬಿವರು ಅಲ್ಲಿಗೆ ತಲುಪಿ ವಾಹನಗಳನ್ನು ಕಸ್ಟಡಿಗೆ ತೆಗೆದಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಯಥಾರ್ಥ ನಂಬ್ರ ಹೊಂದಿರುವ ವಾಹನದ ಮಾಲಕ ನೆಲ್ಲಿಕುಂಜೆ ನಿವಾಸಿಯೆಂದು ತಿಳಿದುಬಂದಿದೆ. ಇವರನ್ನು  ಪೊಲೀಸರು ಠಾಣೆಗೆ ಕರೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೇ ವೇಳೆ ನಕಲಿ ನಂಬ್ರ ಪ್ಲೇಟ್ ಅಳವಡಿಸಿದ ವಾಹನದ ಮಾಲಕ ಬೇಳ ನಿವಾಸಿಯೆಂದು  ಪತ್ತೆಹಚ್ಚಲಾಗಿದೆ. ಈ ವ್ಯಕ್ತಿಗೆ ಪೊಲೀಸರು ನೋಟೀಸು ನೀಡಿದ್ದರೂ ಠಾಣೆಯಲ್ಲಿ ಹಾಜ ರಾಗಲಿಲ್ಲ. ಆದ್ದರಿಂದ ಈ ವ್ಯಕ್ತಿ ವಿರುದ್ಧ ಕೇಸು ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಬೇಳ ನಿವಾಸಿಯ ವಾಹನದ ಯಥಾರ್ಥ ನಂಬ್ರ ಕೆಎಲ್೧೪ಎಜಿ 2557 ಆಗಿದೆ. ಈ ವಾಹನಕ್ಕೆ ಹಣಕಾಸು ಸಂಸ್ಥೆಗಳಲ್ಲಿ ಸಾಲವಿದ್ದು, ಇದರಿಂದ  ಅಧಿಕಾರಿಗಳು  ಇದನ್ನು ವಶಕ್ಕೆ ತೆಗೆದುಕೊಳ್ಳುವರೆಂಬ ಭಯದಿಂದ ಈ ವಾಹನಕ್ಕೆ ನಕಲಿ ನಂಬ್ರ ಅಳವಡಿಸಲಾಗಿದೆಯೆಂದು ತಿಳಿದುಬಂದಿದೆ. ಇದೇ ವೇಳೆ ನಕಲಿ ನಂಬ್ರ ಅಳವಡಿಸಿದ ವಾಹನವನ್ನು ಯಾವುದಾದರೂ ಕಾನೂನುವಿರುದ್ಧ ಚಟುವಟಿಕೆಗೆ ಬಳಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page