ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ: ಚಾಲಕ ಅಪಾಯದಿಂದ ಪಾರು

ಕಾಸರಗೋಡು: ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾಗಿದ್ದು ಚಾಲಕ ಸಂಭಾವ್ಯ ದುರಂತದಿಂದ ಅದೃಷ್ಟವಶಾತ್ ಪಾರಾದ ಘಟನೆ ನೆಲ್ಲಿಕಟ್ಟೆ ಬಳಿಯ ಅದ್ರುಕುಳಿಯಲ್ಲಿ ನಿನ್ನೆ ನಡೆದಿದೆ. ವಿನೋದ್ ಎಂಬವರ ಮಾಲಕತ್ವದಲ್ಲಿರುವ ಮಾರುತಿ 800 ಕಾರು ಬೆಂಕಿಗಾಹುತಿಯಾಗಿದೆ. ಘಟನೆ ವೇಳೆ ಈ ಕಾರನ್ನು ಅಶ್ರಫ್ ಎಂಬವರು ಚಲಾಯಿಸುತ್ತಿದ್ದರು. ಅದ್ರುಕುಳಿಯ ಏರು ರಸ್ತೆಯಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ಅದರ ಬ್ರೇಕ್ ವಿಫಲಗೊಂಡಿತ್ತು. ಈ ವೇಳೆ ಚಾಲಕ ಅದನ್ನು ಹಿಂದಕ್ಕೆ ಸರಿಸಿದಾಗ ಕಾಂಕ್ರೀಟ್ ಗೋಡೆಗೆ ಢಿಕ್ಕಿ ಹೊಡೆದು ನಿಂತಿತ್ತು. ಈ ವೇಳೆ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಅದನ್ನು ಗಮನಿಸಿದ ಚಾಲಕ ತಕ್ಷಣ ಹೊರಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಲಭಿಸಿದ ಮಾಹಿತಿ ಪ್ರಕಾರ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ತಲುಪಿ  ಬೆಂಕಿ ನಂದಿಸಿದೆ. ಅಷ್ಟರೊಳಗೆ ಕಾರು ಪೂರ್ಣವಾಗಿ  ಬೆಂಕಿಗಾಹುತಿಯಾಗಿತ್ತು. 

ಫಯರ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಅಮಲ್,  ಸಿರಾಜುದ್ದೀನ್, ವೈಶಾಖ್ ಎಂ.ಎ, ಚಾಲಕ ಪ್ರಸೀದ್, ಹೋಂಗಾರ್ಡ್ ಗಳಾದ ರಾಜೇಂದ್ರನ್, ಶ್ರೀಜಿತ್ ಎಂಬಿವರು  ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿದ್ದರು. ಶಾರ್ಟ್ ಸರ್ಕ್ಯೂಟ್‌ನಿಂದ ಕಾರಿಗೆಬೆಂಕಿ ತಗಲಿರಬಹುದೆಂದು ಅಗ್ನಿಶಾಮಕದಳ ಸಂಶಯ ವ್ಯಕ್ತಪಡಿಸಿದೆ.

You cannot copy contents of this page