ಮಂಜೇಶ್ವರ: ಗಡಿನಾಡು ಮತ್ತು ಹೊರನಾಡು ಕನ್ನಡಿಗರನ್ನು ಒಳಗೊಂಡAತೆ ಕರ್ನಾಟಕ ಸರಕಾರ ಹೊಸ ಸಾಂಸ್ಕೃತಿಕ ನೀತಿಯನ್ನು ರೂಪಿಸಬೇಕು. ಉಭಯ ವಿಭಾಗಗಳ ಕನ್ನಡಿಗರ ಅಭಿವೃದ್ಧಿಗಾಗಿ ಪ್ರತಿ ಬಜೆಟ್‌ನಲ್ಲೂ ವಿಶೇಷ ಆರ್ಥಿಕ ಪ್ಯಾಕೇಜ್ ಮೀಸಲಿಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಬರಗೂರು ರಾಮಚಂದ್ರಪ್ಪ ಕರ್ನಾಟಕ ಸರಕಾರವನ್ನು ಆಗ್ರಹಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ, ತುಳು ಭವನ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ಗಳ ಸಂಯುಕ್ತ ಆಶ್ರಯದಲ್ಲಿ ಮಂಜೇಶ್ವರ ಗಿಳಿವಿಂಡುನಲ್ಲಿ ಆಯೋಜಿಸಿದ್ದ ಬಹುಭಾಷಾ ವಿದ್ವಾಂಸ ಡಾ. ಪಿ. ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಭಾಷೆಯ ದೃಷ್ಟಿಯಿಂದ ಮಾತ್ರವಲ್ಲದೆ, ಭಾಷೆಯನ್ನು ಬಳಸುವ ಜನರ ದೃಷ್ಟಿಕೋನದಿಂದಲೂ ಚಿಂತಿಸಿದಾಗ ಇಂತಹ ನೀತಿಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸಾಧ್ಯವಾಗುತ್ತದೆ. ಕನ್ನಡಿಗರನ್ನು ಉಳಿಸಿದರೆ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನೂ ಉಳಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮ್ಮದ್, ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ಜನರು ನೆಲೆಸಿರುವ ಕಾಸರಗೋಡಿನ ಜನರು ಬಹುತ್ವದ ಸೇತುವೆಯನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಬೆಂಬಲಕ್ಕೆ ಕರ್ನಾಟಕ ಸದಾ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯ್ಲಿ ಮಾತನಾಡಿ, ತುಳು ಭಾಷೆ ಮತ್ತು ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದವರಲ್ಲಿ ಡಾ. ಪಿ. ವೆಂಕಟರಾಜ ಪುಣಿಂಚಿತ್ತಾಯರು ಪ್ರಮುಖರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಫಿ ಬಂಡಸಾಲ ದುಬೈ ಅವರ ‘ಹೃದಯ ಗೀತೆ’ ಕೃತಿಯನ್ನು ಕರ್ನಾಟಕದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಹೀದ್ ಬಿಡುಗಡೆಗೊಳಿಸಿದರು.ಎಂ.ಎಸ್. ಥೋಮಸ್ ಡಿಸೋಜ ಕೃತಿಯ ಪರಿಚಯ ಮಾಡಿದರು.
ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ, ಕವಿ ಕೆ. ರಾಧಾಕೃಷ್ಣ ಉಳಿಯತ್ತಡ್ಕ, ಕೇರಳ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಕಬೈಲು ಸತೀಶ್ ಅಡಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಎನ್.ಚನಿಯಪ್ಪ ನಾಯ್ಕ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಓಂಕೃಷ್ಣ, ಹರಿಣಾಕ್ಷಿ ಹರಿಶ್ಚಂದ್ರ ಮಂಜೇಶ್ವರ ಉಪಸ್ಥಿತರಿದ್ದರು.
ಮಂಜೇಶ್ವರ ಬ್ಲಾಕ್ ಪಂ.ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುವೆಂಪು ಪ್ರತಿಷ್ಠಾನದ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಸ್ವಾಗತಿಸಿ, ವ್ಯವಸ್ಥಾಪಕ ಟ್ರಸ್ಟಿ ವಿಜಯರಾಜ ಪುಣಿಂಚಿತ್ತಾಯ ವಂದಿಸಿದರು. ಪತ್ರಕರ್ತ ರವಿ ನಾಯ್ಕಾಪು ನಿರೂಪಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ನೇತೃತ್ವ ವಹಿಸಿದ್ದರು. ಅಖಿಲೇಶ್ ನಗುಮುಗಂ, ಶ್ರೀಕಾಂತ್ ನೆಟ್ಟಣಿಗೆ, ತಾರಾನಾಥ ರೈ ಕಡಾರು ಬೀಡು, ಹರೀಶ್ ಗೋಸಾಡ, ವಸಂತ ಬಾರಡ್ಕ, ವಿನೋದ ರೈ, ಮಾಲಿಂಗ ಪಾಟಾಳಿ ಸೀತಾಂಗೋಳಿ, ಪ್ರೊ.ಎ.ಶ್ರೀನಾಥ್, ವಿ.ಜಿ.ಕಾಸರಗೋಡು ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಜೇಶ್ವರ ಪಂ. ಅಧ್ಯಕ್ಷ ಬಶೀರ್ ಕನಿಲ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುವೆಂಪು ವಿರಚಿತ ಹಾಡಿನ ನೃತ್ಯ ವೈಭವವನ್ನು ಸೂರಂಬೈಲಿನ ಕಣ್ಮಣಿ ತಂಡ ಪ್ರದರ್ಶಿಸಿತು. ಡಾ.ನಾಗೇಶ್ ಕೆ.ಎನ್. ಬೆಂಗಳೂರು ನಿರ್ದೇಶನದಲ್ಲಿ ಕಲಾತಂಡದ ನೃತ್ಯ ಪ್ರದರ್ಶನ, ಮೆಗಾ ತಿರುವಾದಿರ ನಡೆದವು.







