ಪೂಜಾ ಸೌಕರ್ಯಕ್ಕಾಗಿ ಜೋಡುಕಲ್ಲುನಲ್ಲಿ ನಿರ್ಮಿಸಿದ ಚಪ್ಪರ ತೆರವುಗೊಳಿಸಬಾರದು- ಶ್ರೀ ರಾಜಶೇಖರಾನಂದ ಸ್ವಾಮೀಜಿ

ಜೋಡುಕಲ್ಲು: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ವಿನಾಯಕ ಚತುರ್ಥಿ ಆಚರಣೆಗಳಂಗವಾಗಿ ಜೋಡುಕಲ್ಲುನಲ್ಲಿ ನಿರ್ಮಿಸಲಾದ ಚಪ್ಪರವನ್ನು ತೆರವುಗೊಳಿಸುವ ನಿರ್ಧಾರದಿಂದ ಸಂಬಂಧಪಟ್ಟ ಅಧಿಕಾರಿಗಳು ಹಿಂದೆ ಸರಿಯಬೇಕೆಂದು ಗುರುಪುರ ಶ್ರೀ ವಜ್ರದೇಹಿ ಮಠಾಧೀಶ ಶ್ರೀರಾಜಶೇಖರನಾನಂದ ಸ್ವಾಮೀಜಿ ಆಗ್ರಹಿಸಿದರು. ಪೈವಳಿಕೆ, ಮೀಂಜ, ಮಂಗಲ್ಪಾಡಿ, ಜೋಡುಕಲ್ಲು ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀವಿನಾಯಕ ಚತುರ್ಥಿ ಆಚರಣಾ ಭೂಮಿ ಸಂರಕ್ಷಣಾ ಸಮಿತಿ ರಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಕ್ತಿಗಳು, ಸಾಮುದಾಯಿಕ ಸಂಘಟನೆಗಳು, ಸಂಸ್ಥೆಗಳು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವಾಗ ಧಾರ್ಮಿಕ ಆಚರಣೆಗಾಗಿ ನಿರ್ಮಿಸಿದ ಚಪ್ಪರವನ್ನು ತೆರವುಗೊಳಿಸಲು ಮುಂದಾಗಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಅವರು ನುಡಿದರು.

ಚಪ್ಪರ ನಿರ್ಮಿಸಿರುವುದು ಭೂಮಿ ಕಬಳಿಸುವುದಕ್ಕಾಗಿ ಅಲ್ಲ. ಧಾರ್ಮಿಕ ಆಚರಣೆಗಳ ಸೌಕರ್ಯಕ್ಕಾಗಿ ಎಂದು ಅವರು ಸ್ಪಷ್ಟಪಡಿಸಿದರು. ಇದರ ವಿರುದ್ಧ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ರಾಜಕೀಯ ಪಕ್ಷ ತಿದ್ದಿಕೊಳ್ಳಲು ಮುಂದಾಗಬೇಕು ಎಂದ ಅವರು ಬಲ ಪ್ರಯೋಗದಿಂದ ಕೆಡಹಲು ಮುಂದಾದರೆ ಹೋರಾಟದಲ್ಲಿ ಕರ್ನಾಟಕದ ಬಹುಸಂಖ್ಯಾತ ಸಮುದಾಯವು ಕೈಜೋಡಿಸಲಿದೆ ಎಂದು ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸೇವಾ ಭಾರತಿ ಅಧ್ಯಕ್ಷ ದಾಮೋದರ ಉಬರಡ್ಕ ಅಧ್ಯಕ್ಷತೆ ವಹಿಸಿದರು. ಶಿವಗಿರಿ ಮಠದ ಸ್ವಾಮಿ ಪ್ರೇಮಾನಂದ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಹಿಂದೂ ಐಕ್ಯವೇದಿ ರಾಜ್ಯ ಕಾರ್ಯದರ್ಶಿ ಪಿ.ವಿ. ಮುರಳೀಧರನ್, ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಕಾರ್ಯವಾಹ್ ಲೋಕೇಶ್ ಜೋಡುಕಲ್ಲು, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಕಣ್ಣೂರು ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ವಿ.ಎಚ್.ಪಿ. ರಾಜ್ಯ ಜಂಟಿ ಕಾರ್ಯದರ್ಶಿ ಅನುರಾಗ್, ಹಿಂದೂ ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್, ಯಾದವ ಮಹಾಸಭಾ ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಇಂಧುಲೇಖ, ಸುರೇಶ್, ರಾಮಕೃಷ್ಣನ್, ವಸಂತಿ ಕುಂಬಳೆ, ಸಂಕಪ್ಪ ರೈ ಮಾತನಾಡಿದರು.

RELATED NEWS

You cannot copy contents of this page