ವಿದ್ಯುತ್ ನೌಕರನೆಂದು ತಿಳಿಸಿ ತಲುಪಿದ ಯುವಕ ಗೃಹಿಣಿಯ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿ

ಕಾಸರಗೋಡು: ವಿದ್ಯುತ್ ಕಚೇರಿ ನೌಕರನೆಂದು ತಿಳಿಸಿ ತಲುಪಿದ ಯುವಕ ಗೃಹಿಣಿಯ ಕುತ್ತಿಗೆಯಿಂದ ಐದು ಪವನ್‌ನ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಕೊಳತ್ತೂರು ಅರಮನಪ್ಪಡಿ ಬಾವಿಕ್ಕರಯಡ್ಕ ಅರಿಯಿಲ್ ಹೌಸ್‌ನ ಬಿ.ಕೆ.ಕೃಷ್ಣನ್ ನಾಯರ್‌ರ ಪತ್ನಿ ಕೆ. ಶುಭ ನೀಡಿದ ದೂರಿನಂತೆ ಬೇಡಗಂ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೊನ್ನೆ ಸಂಜೆ ಆರು ಗಂಟೆ ವೇಳೆ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಮನೆ ಹಿಂಭಾಗದಲ್ಲಾಗಿ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ ವ್ಯಕ್ತಿ ತಲುಪಿದ್ದನು. ತಾನು ವಿದ್ಯುತ್ ಕಚೇರಿ ನೌಕರನೆಂದು ತಿಳಿಸಿದ ಆತ ಕೊಳವೆ ಬಾವಿ ಸಮೀಪಕ್ಕೆ ತಲುಪಿ ವಯರ್‌ಗಳನ್ನು ಪರಿಶೀಲಿಸಿದ್ದಾನೆ. ಈ ವೇಳೆ ಅಲ್ಲಿಗೆ ತಲುಪಿದ ಶುಭರ ಕುತ್ತಿಗೆಯಿಂದ ಯುವಕ ಐದು ಪವನ್‌ನ ಸರವನ್ನು ಕಸಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಶುಭ ಅದನ್ನು ಎದುರಿಸಿದ್ದು, ಅಷ್ಟರಲ್ಲಿ ಸರ ತುಂಡರಿಸಲ್ಪಟ್ಟಿದೆ. ಈ ವೇಳೆ ನಾಲ್ಕು ಪವನ್‌ನಷ್ಟು ಚಿನ್ನವನ್ನು ದುಷ್ಕರ್ಮಿ ಲಪಟಾಯಿಸಿದ್ದಾನೆ. ಬೊಬ್ಬೆ ಕೇಳಿ ನೆರೆಮನೆಯವರು ತಲುಪುವಷ್ಟರಲ್ಲಿ ದುಷ್ಕರ್ಮಿ ಓಡಿ ಪರಾರಿಯಾಗಿದ್ದಾನೆಂದು ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತಲುಪಿ ವಿವಿಧೆಡೆ ಹುಡುಕಾಡಿದರೂ ದುಷ್ಕರ್ಮಿಗಳನ್ನು ಪತ್ತೆಹಚ್ಚಲಾಗಲಿಲ್ಲ.

You cannot copy contents of this page