ಮದ್ಯ ಬಾರ್‌ನಲ್ಲಿ ಹೊಡೆದಾಟ: ಗಾಯಗೊಂಡ ವ್ಯಕ್ತಿ ಸಾವು; ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲು

ಕಾಸರಗೋಡು: ಮದ್ಯ ಬಾರ್‌ನಲ್ಲಿ ನಡೆದ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೆರುವತ್ತೂರು ತಿಮಿರಿ ಚಂಬ್ರಕಾನದ ಸಿ.ವಿ. ಮನ್ಸೂರ್ ಅಲಿ (50) ಸಾವನ್ನಪ್ಪಿದ ವ್ಯಕ್ತಿ. ಕಳೆದ ಶನಿವಾರ ಚೆರುವತ್ತೂರು ಞಾಣಕೈಯ ಬಾರ್‌ನಲ್ಲಿ ಮನ್ಸೂರ್ ಅಲಿ ಮದ್ಯ ಸೇವಿಸುತ್ತಿದ್ದ ವೇಳೆ ಹಣದ ವಿಷಯದಲ್ಲಿ ಅವರು ಮತ್ತು ಇತರ ನಾಲ್ಕು ಮಂದಿ ಮಧ್ಯೆ ಹೊಡೆದಾಟ ನಡೆದಿತ್ತು. ಅದಾದ ಮರು ದಿನ ಮನ್ಸೂರ್ ಅಲಿ ಅದೇ ಬಾರ್‌ನ ಎದುರುಗಡೆಯ ಚರಂಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಚೆರು ವತ್ತೂರು ಪಯ್ಯಂಗಿಯ ಝಲ್ಫೀಕರ್, ಪಿಲಿಕೋಡ್ ಮಟ್ಟಲಾಯಿಯ ಎಂ. ರತೀಶ್, ಚೆರುವತ್ತೂರಿನ ಸುಹೈಲ್ ಮತ್ತು ಅಕ್ಷಯ್ ಎಂಬವರ ವಿರುದ್ಧ ಚಂದೇರ ಪೊಲೀಸರು ಮೊದಲು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಝುಲ್ಫೀಕರ್ ಮತ್ತು ಅಕ್ಷಯ್‌ರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಇತರ ಇಬ್ಬರು ಆರೋಪಿಗಳ ಪತ್ತೆಗಾಗಿ ರುವ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ತೊಡಗಿರುವಂತೆಯೇ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮನ್ಸೂರ್ ಅಲಿ ನಿನ್ನೆ ಸಾವನ್ನಪ್ಪಿದ್ದಾರೆ.

ಇದರಿಂದಾಗಿ ಈ ಘಟನೆಯ ಬಗ್ಗೆ ಈ ಹಿಂದೆ ದಾಖಲಿಸಲಾಗಿದ್ದ ನರಹತ್ಯಾ ಯತ್ನ ಪ್ರಕರಣವನ್ನು ಚಂದೇರ ಪೊಲೀಸರು ಈಗ ಕೊಲೆ ಪ್ರಕರಣವಾಗಿ ಬದಲಾಯಿಸಿಕೊಂಡು ಮುಂದಿನ ಹಂತದ ತನಿಖೆ ಆರಂಭಿಸಿದ್ದಾರೆ. ಡಿವೈಎಸ್‌ಪಿ ಎಂ.ವಿ. ಅನಿಲ್ ಕುಮಾರ್‌ರ ನೇತೃತ್ವದ ಪೊಲೀಸರು ಘಟನೆ ನಡೆದ ಬಾರ್‌ಗೆ ಆಗಮಿಸಿ ಹಾಗೂ ಮನ್ಸೂರ್ ಅಲಿ ಬಿದ್ದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದ ಚರಂಡಿ ಮತ್ತು ಪರಿಸರ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ಬಾರ್ ಸಿಬ್ಬಂದಿಗಳ ಹೇಳಿಕೆಗಳನ್ನು ಅವರು ದಾಖಲಿಸಿ ಕೊಂಡಿದ್ದಾರೆ. ಮಾತ್ರವಲ್ಲ ಬಾರ್‌ನ ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಮೃತ ಮನ್ಸೂರ್ ಅಲಿ ಪತ್ನಿ ಕೆ.ಪಿ. ಝುಬೈರಿಯ, ಮಕ್ಕಳಾದ ಫಾತಿಮ, ಮಿಸ್‌ಹಾ, ಸಹೋದರ ನೌಶಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page