ಉಪ್ಪಳ: ಮಾದಕವಸ್ತು ಬೇಟೆಗಿಳಿದ ಪೊಲೀಸರನ್ನು ಕಂಡು ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ನಿಯಂತ್ರಣ ತಪ್ಪಿ ಅಂಗಡಿಯ ವರಾಂಡಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಬಳಿಕ ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ, ಎಂಡಿಎಂಎ ಪತ್ತೆಯಾಗಿದ್ದು, ಈ ಸಂಬಂಧ ಕಾರಿನಲ್ಲಿದ್ದ ಮೂವರನ್ನು ಬಂಧಿಸಲಾಗಿದೆ.
ಉಪ್ಪಳ ಮಜಲ್ ಅರಬ್ ಕೋಟೇಜ್‌ನ ಮೊಹಮ್ಮದ್ ಅಯಾಸ್ (35), ಉಪ್ಪಳ ಬಪ್ಪಾಯಿತೊಟ್ಟಿ ಬಾತಿಷ ಹೌಸ್‌ನ ಅಮೀರ್ ಬಿ.ಎಂ (43), ಮಂಗಲ್ಪಾಡಿ ಅಡ್ಕ ಫಾರೂಕ್ ಮಂಜಿಲ್‌ನ ಉಮ್ಮರ್ ಫಾರೂಕ್ (35) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರು ಸಂಚರಿಸುತ್ತಿದ್ದ ಕಾರಿನಿಂದ 3.91 ಗ್ರಾಂ ಎಂಡಿಎಂಎ, 6.060 ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ನಿನ್ನೆ ಬೆಳಿಗ್ಗೆ 10.55ರ ವೇಳೆ ಕರ್ನಾಟಕ ಭಾಗದಿಂದ ಉಪ್ಪಳ ಭಾಗಕ್ಕೆ ವಾಹನದಲ್ಲಿ ಮಾದಕವಸ್ತು ಸಾಗಾಟವಾಗುತ್ತಿರುವ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಎಸ್ಪಿ ನೇತೃತ್ವದ ಸ್ಕ್ವಾಡ್ ಹಾಗೂ ಮಂಜೇಶ್ವರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಬಾಯಾರು ಭಾಗದಿಂದ ಬರುತ್ತಿದ್ದ ಕಾರಿನ ಮೇಲೆ ಸಂಶಯಗೊಂಡ ಪೊಲೀಸ್ ತಂಡ ಅದನ್ನು ಹಿಂಬಾಲಿಸಿದಾಗ ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಕೈಕಂಬಕ್ಕೆ ತಲುಪಿದಾಗ ಅಂಗಡಿಯ ವರಾಂಡಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಕೂಡಲೇ ಅದರಲ್ಲಿದ್ದವರನ್ನು ಕಸ್ಟಡಿಗೆ ತೆಗೆದು ಕಾರನ್ನು ಪರಿಶೀಲಿಸಿದಾಗ ಮಾದಕವಸ್ತುಗಳು ಪತ್ತೆಯಾಗಿದೆ. ಬಂಧಿತರನ್ನು ಇಂದು ನ್ಯಾಯಾಲ ಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.ಬಂಧಿತರ ಪೈಕಿ ಮೊಹಮ್ಮದ್ ಅಯಾನ್ ವಿರುದ್ಧ ಜಿಲ್ಲೆಯಲ್ಲಿ 9 ಕೇಸುಗಳು, ತೃಶೂರಿನಲ್ಲಿ 1 ಕೇಸು, ಅಮೀರ್ ಬಿ.ಎಂ ವಿರುದ್ಧ ಮಂಜೇಶ್ವರದಲ್ಲಿ 1 ಕೇಸು ಈ ಮೊದಲು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






