ಕುಂಬಳೆ: ಕುಂಬಳೆ ಪಂಚಾಯತ್ ಕೇರಳೋತ್ಸವದಲ್ಲಿ ಆವೇಶ ಹೆಚ್ಚಿದಾಗ ಪಂಚಾಯತ್ ಅಧ್ಯಕ್ಷ ಮೈದಾನಕ್ಕಿಳಿದು ನಡೆಸಿದ ಪ್ರದರ್ಶನದಲ್ಲಿ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಎರಡು ವರ್ಷದ ಬಳಿಕ ಪಂಚಾಯತ್ ಅಧ್ಯಕ್ಷ ಎಂದು ತೀರ್ಮಾನಿಸಿರುವ ಎ.ಕೆ. ಆರೀಫ್‌ಗೆ ಯಾವುದೇ ಪಾಲು ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಸಂದೇಶದಲ್ಲಿ ಅವರು ತಿಳಿಸಿದ್ದಾರೆ. ತನಗೆ ಮಾತ್ರವಲ್ಲ, ಇತರ ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ಈ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲವೆಂದು ಆರೀಫ್ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಓರ್ವ ಆಟಗಾರನ ವಿಳಾಸದ ಬಗ್ಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಆರೋಪವಿದೇಯನಾದ ವ್ಯಕ್ತಿಯ ವಿಳಾಸ ಸ್ಪಷ್ಟಪಡಿಸಿದ ಬಳಿಕ ಸ್ಪರ್ಧೆ ನಡೆಸಲು ಮುಂದೂಡಿದ್ದ ಕ್ರಿಕೆಟ್ ಸ್ಪರ್ಧೆಯನ್ನು ಬಳಿಕ ಸ್ಪರ್ಧೆ ನಡೆಸದೆ ಒಂದು ತಂಡ ಜಯ ಗಳಿಸಿದೆ ಎಂದು ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಸ್ವಯಂ ಘೋಷಿಸಿರುವುದು ಪಂಚಾಯತ್ ಸದಸ್ಯರನ್ನು ಹಾಗೂ ಪಂಚಾಯತ್‌ನ ಕ್ರೀಡಾ ಪ್ರೇಮಿಗಳನ್ನು ರೋಷಗೊಳಿಸಿದೆ.
ಕೇರಳೋತ್ಸವದ ಉದ್ದೇಶವನ್ನೇ ಬುಡಮೇಲುಗೊಳಿಸಿ ಸ್ಪರ್ಧೆ ನಡೆಸದೆ ಫಲಿತಾಂಶ ಘೋಷಿಸಲು ಅಬ್ದುಲ್ ಖಾದರ್‌ಗೆ ಯಾರು ಅಧಿಕಾರ ನೀಡಿರುವುದೆಂದು ಒಲಿವ್ ಬಂಬ್ರಾಣ ಕ್ಲಬ್ ಪ್ರಶ್ನಿಸಿದೆ. ನ್ಯಾಯ ಹಾಗೂ ಸಮಾನ ಪರಿಗಣನೆ ಈ ವಿಷಯದಲ್ಲಿ ಉಂಟಾಗಬೇಕೆಂದು, ಅಲ್ಲಿವರೆಗೆ ಕ್ಲಬ್ ಹೋರಾಟ ಮುಂದುವರಿಸಲಿದೆ ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ. ಪಂಚಾಯತ್ ಅಧ್ಯಕ್ಷ ಪಕ್ಷಪಾತ ನೀತಿ ಅನುಸರಿಸಿದ್ದು ಆ ಹುದ್ದೆಯಲ್ಲಿರುವಾಗ ನಿಷಕ್ಷವಾಗಿ, ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಕಾರ್ಯಾಚರಿಸುವೆನೆಂದು ಪ್ರಮಾಣವಚನಗೈದು ಅಧಿಕಾರಕ್ಕೇರಿದ ವ್ಯಕ್ತಿ ಪ್ರಮಾಣವಚನ ಕಳೆದ ಕೂಡಲೇ ಅದನ್ನು ಕಸದ ಬುಟ್ಟಿಗೆ ಎಸೆದಿರುವುದಾಗಿಯೂ ಒಲಿವ್ ಕ್ಲಬ್ ಆರೋಪಿಸಿದೆ. ಈ ರೀತಿಯ ಓರ್ವರು ಮುಂದೆಯೂ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ಪಂಚಾಯತ್‌ನ ಜನರಿಗೆ ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲು ಎಂದು ಒಲಿವ್ ಕ್ಲಬ್ ಪದಾಧಿಕಾರಿಗಳು ತಿಳಿಸಿದ್ದಾರೆ. ವಿವಾದದ ಹಿನ್ನೆಲೆಯಲ್ಲಿ ಮುಂದೂಡಿದ್ದ ಸ್ಪರ್ಧೆ ನಡೆಸದೆ ಸ್ವಂತ ವಾರ್ಡ್ ಆದ ಪೆರುವಾಡ್‌ನ ತಂಡ ಜಯಗಳಿಸಿರುವುದಾಗಿ ಪಂಚಾಯತ್ ಅಧ್ಯಕ್ಷ ಸ್ವಯಂ ಘೋಷಿಸಿದ್ದಾರೆ. ಮಾತ್ರವಲ್ಲ ಬ್ಲೋಕ್ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ಆ ಕ್ಲಬ್‌ಗೆ ಅರ್ಹತೆ ನೀಡಿದ್ದಾರೆ. ಇದರಿಂದ ಹೆಚ್ಚಿನ ಪಕ್ಷಪಾತ ನೀತಿ ಬೇರೆ ಇರದು ಎಂದು ಕ್ಲಬ್ ಆರೋಪಿಸಿದೆ. ಇದೇ ವೇಳೆ ಈ ರೀತಿಯಲ್ಲಿ ಪಂಚಾಯತ್ ಅಧ್ಯಕ್ಷ ಕೈಗೊಂಡ ತೀರ್ಮಾನ ಏಕಪಕ್ಷೀಯವಾಗಿದೆ ಎಂದು ಎ.ಕೆ. ಆರೀಫ್ ಕೂಡಾ ವಾಯ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪಕ್ಷಕ್ಕೆ ದೂರು ನೀಡುವುದಾಗಿಯೂ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.






